ಹೇಗ್: ಉಕ್ರೇನ್ ಮಕ್ಕಳನ್ನು ಕಾನೂನು ಬಾಹಿರವಾಗಿ ರಷ್ಯಾಗೆ ಗಡೀಪಾರು ಮಾಡಿದ ಆರೋಪದ ಮೇಲೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ರಷ್ಯಾದ ಅಧಿಕಾರಿ ಮಾರಿಯಾ ಅಲೆಕ್ಸೆಯೆವ್ನಾ ಎಲ್ವೊವಾ-ಬೆಲೋವಾ ಅವರ ವಿರುದ್ಧ ಅಂತರರಾಷ್ಟ್ರೀಯ ಕ್ರಿಮಿನಲ್ ಕೋರ್ಟ್(ಐಸಿಸಿ) ಶುಕ್ರವಾರ ಬಂಧನ ವಾರಂಟ್ ಹೊರಡಿಸಿದೆ ಎಂದು ಸಿಎನ್ಎನ್ ವರದಿ ಮಾಡಿದೆ.
ಕಳೆದ ಒಂದು ವರ್ಷದಿಂದ ನಡೆಯುತ್ತಿರುವ ಯುದ್ಧದ ಸಮಯದಲ್ಲಿ ಉಕ್ರೇನ್‌ನಲ್ಲಿ ರಷ್ಯಾ ಪಡೆಗಳು ಮಾಡಿದ ಯುದ್ಧ ಅಪರಾಧಗಳಿಗೆ ರಷ್ಯಾದ ಅಧ್ಯಕ್ಷರು ಹೊಣೆಗಾರರಾಗಿದ್ದಾರೆ ಎಂದು ಹೇಗ್ ನಲ್ಲಿರುವ ಐಸಿಸಿ ಆರೋಪಿಸಿದೆ.
ದೇಶವೊಂದರ ಜನರನ್ನು(ಮಕ್ಕಳನ್ನು) ಕಾನೂನುಬಾಹಿರವಾಗಿ ಗಡೀಪಾರು ಮಾಡುವ ಯುದ್ಧ ಅಪರಾಧಕ್ಕೆ ಪುಟಿನ್ ಕಾರಣ. ಇದರೊಂದಿಗೆ ಉಕ್ರೇನ್‌ನ ಆಕ್ರಮಿತ ಪ್ರದೇಶಗಳಿಂದ ರಷ್ಯಾದ ಒಕ್ಕೂಟಕ್ಕೆ ಜನಸಂಖ್ಯೆಯನ್ನು(ಮಕ್ಕಳನ್ನು) ಕಾನೂನುಬಾಹಿರವಾಗಿ ವರ್ಗಾಯಿಸುವ ಯುದ್ಧ ಅಪರಾಧಕ್ಕೆ ಪುಟಿನ್ ಜವಾಬ್ದಾರರಾಗಿದ್ದಾರೆ ಎಂದು ಐಸಿಸಿ ಪ್ರಕಟಣೆಯಲ್ಲಿ ತಿಳಿಸಿದೆ.
ರಷ್ಯಾ ಒಕ್ಕೂಟದ ಅಧ್ಯಕ್ಷರ ಕಚೇರಿಯಲ್ಲಿ ಮಕ್ಕಳ ಹಕ್ಕುಗಳ ಆಯುಕ್ತರಾದ ಮಾರಿಯಾ ಅಲೆಕ್ಸೆಯೆವ್ನಾ ಎಲ್ವೊವಾ-ಬೆಲೋವಾ ಅವರನ್ನು ಇದೇ ರೀತಿಯ ಆರೋಪಗಳ ಮೇಲೆ ಬಂಧಿಸುವಂತೆ ಐಸಿಸಿ ಬಂಧನ ವಾರಂಟ್ ಹೊರಡಿಸಿದೆ.