ನವದೆಹಲಿ: ಗುಟ್ಕಾ ಮತ್ತು ಇತರ ತಂಬಾಕು ಆಧಾರಿತ ಉತ್ಪನ್ನಗಳ ಮಾರಾಟ, ಉತ್ಪಾದನೆ ಮತ್ತು ಸಾಗಣೆಯನ್ನು ನಿಷೇಧಿಸುವ 2018ರ ಮೇ ತಿಂಗಳ ಅಧಿಸೂಚನೆಯನ್ನು ರದ್ದುಗೊಳಿಸಿದ ಮದ್ರಾಸ್ ಹೈಕೋರ್ಟ್‌ನ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾದ ಮನವಿಗೆ ಆಹಾರ ಸುರಕ್ಷತಾ ಆಯುಕ್ತ ಸೇರಿದಂತೆ ಇತರರಿಂದ ಸುಪ್ರೀಂ ಕೋರ್ಟ್ ಪ್ರತಿಕ್ರಿಯೆ ಕೇಳಿದೆ.
ನ್ಯಾಯಮೂರ್ತಿಗಳಾದ ಕೆ.ಎಂ. ಜೋಸೆಫ್ ಮತ್ತು ಬಿ.ವಿ. ನಾಗರತ್ನ ಅವರನ್ನೊಳಗೊಂಡ ನ್ಯಾಯಪೀಠವು, ಈ ಸಂಬಂಧ ತಮಿಳುನಾಡು ಸರ್ಕಾರ ಸಲ್ಲಿಸಿದ ಮನವಿಯ ಮೇರೆಗೆ ಆಹಾರ ಸುರಕ್ಷತಾ ಆಯುಕ್ತ, ಜಯವಿಲಾಸ್ ತಂಬಾಕು ವ್ಯಾಪಾರಿಗಳು ಮತ್ತು ಇತರರಿಗೆ ನೋಟಿಸ್ ಜಾರಿ ಮಾಡಿದೆ.
ತಮಿಳುನಾಡು ಪರ ವಾದ ಮಾಡಿದ ಹೆಚ್ಚುವರಿ ಅಡ್ವೋಕೇಟ್ ಜನರಲ್ ಅಮಿತ್ ಆನಂದ್ ತ್ರಿವಾರಿ ಅವರು, 'ಗುಟ್ಕಾ ಮತ್ತು ಇತರ ತಂಬಾಕು ಉತ್ಪನ್ನಗಳ ಮಾರಾಟ, ಸಂಗ್ರಹಣೆ, ತಯಾರಿಕೆ ಇತ್ಯಾದಿಗಳನ್ನು ನಿಷೇಧಿಸುವ ಆಹಾರ ಸುರಕ್ಷತಾ ಆಯುಕ್ತರ ಆದೇಶಗಳು ಆಹಾರ ಸುರಕ್ಷತೆ ಮತ್ತು ಮಾನದಂಡಗಳ (2.3.4) ನಿಯಮ, 2011ರ ನಿಷೇಧ ಮತ್ತು ಮಾರಾಟದ ಮೇಲಿನ ನಿರ್ಬಂಧ ನಿಯಮಗಳಿಗೆ ಒಳಪಟ್ಟಿವೆ' ಎಂದರು.