ಭಾರತೀಯ ರೈಲ್ವೇ, ಸೇವೆ ಮತ್ತು ಹೊಸ ರೈಲುಗಳ ವಿಷಯದಲ್ಲಿ ಮಹತ್ತರವಾದ ಪ್ರಗತಿಯನ್ನು ಸಾಧಿಸುತ್ತಿದೆ. ಇದು ವಿಶ್ವದ ಅತಿದೊಡ್ಡ ರೈಲ್ವೆ ಜಾಲಗಳಲ್ಲಿ ಒಂದನ್ನು ನಿರ್ವಹಿಸುವ ಹೆಗ್ಗಳಿಕೆಯನ್ನು ಸಹ ಹೊಂದಿದೆ. ಆದರೆ ಮಹಾರಾಷ್ಟ್ರದಲ್ಲಿರುವ ಒಂದು ರೈಲ್ವೆಯ ಬಗ್ಗೆ ನಿಮಗಿನ್ನೂ ತಿಳಿದಿಲ್ಲ ಅನಿಸುತ್ತದೆ. ಈ ರೈಲುಮಾರ್ಗ ಸರ್ಕಾರದ ಒಡೆತನದಲ್ಲಿಲ್ಲ ಬದಲಾಗಿ ಬ್ರಿಟನ್‌ನಲ್ಲಿರುವ ಖಾಸಗಿ ಕಂಪನಿ ಮಾಲೀಕತ್ವ ಹೊಂದಿದೆ.
ಬ್ರಿಟಿಷರ ಕಾಲದಲ್ಲಿ ನಿರ್ಮಿಸಲಾದ ಶಾಕುಂತಲಾ ರೈಲ್ವೇಯು ಯವತ್ಮಾಲ್ ಮತ್ತು ಮೂರ್ತಿಜಾಪುರ ನಡುವಿನ 190 ಕಿಮೀ ಉದ್ದದ ನ್ಯಾರೋ ಗೇಜ್ ರೈಲು ಮಾರ್ಗವಾಗಿ ಚಲಿಸುತ್ತಿತ್ತು. ವಸಾಹತುಶಾಹಿ ಯುಗದಲ್ಲಿ, ಈ ಟ್ರ್ಯಾಕ್‌ನಲ್ಲಿ ರೈಲುಗಳನ್ನು ಗ್ರೇಟ್ ಇಂಡಿಯನ್ ಪೆನಿನ್ಸುಲರ್ ರೈಲ್ವೇ (ಜಿಐಪಿಆರ್) ನಡೆಸುತ್ತಿತ್ತು. ಇದು ಮಧ್ಯ ಭಾರತದಾದ್ಯಂತ ಕಾರ್ಯನಿರ್ವಹಿಸುತ್ತಿತ್ತು.
ವಿಚಿತ್ರವೆಂದರೆ 1952ರಲ್ಲಿ ರೈಲ್ವೇಯನ್ನು ರಾಷ್ಟ್ರೀಕರಣಗೊಳಿಸಿದಾಗ ಈ ಮಾರ್ಗ ಸಂಪೂರ್ಣ ನಿರ್ಲಕ್ಷಕ್ಕೊಳಗಾಯಿತು. ಆದರೆ ಇದರ ಒಡೆತನ ಇನ್ನು ಅದೇ ಒಡೆಯನದಲ್ಲಿದೆ.
ಶಕುಂತಲಾ ರೈಲ್ವೇ ಇನ್ನೂ ನ್ಯಾರೋ ಗೇಜ್ ಮಾರ್ಗಗಳನ್ನು ಬಳಸುತ್ತದೆ. ಪ್ರತಿ ದಿನ ಕೇವಲ ಒಂದು ರಿಟರ್ನ್ ಪ್ರಯಾಣವನ್ನು ಮಾಡುತ್ತದೆ. ಪ್ರಸ್ತುತ, ರೈಲು ಅಮರಾವತಿ ಜಿಲ್ಲೆಯ ಯವತ್ಮಾಲ್ ಮತ್ತು ಅಚಲ್ಪುರ್ ನಡುವಿನ 190 ಕಿಮೀ ದೂರವನ್ನು ಕ್ರಮಿಸಲು ಸುಮಾರು 20 ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ಮಹಾರಾಷ್ಟ್ರದ ಈ ಎರಡು ಹಳ್ಳಿಗಳ ನಡುವೆ ಸಂಚರಿಸುವ ಬಡ ಜನರಿಗೆ ಈ ರೈಲೇ ಜೀವನಾಡಿ.
ಒಂದು ಟ್ರಿಪ್’ಗೆ ಸುಮಾರು 150 ರೂ ವೆಚ್ಚವಾಗುತ್ತದೆ. ಆದ್ದರಿಂದ ಮಹಾರಾಷ್ಟ್ರದ ಈ ಎರಡು ಹಳ್ಳಿಗಳ ನಡುವೆ ಪ್ರಯಾಣಿಸುವ ಬಡ ಜನರಿಗೆ ರೈಲು ಜೀವನಾಡಿಯಾಗಿ ಕಾರ್ಯನಿರ್ವಹಿಸುತ್ತದೆ ಎನ್ನಬಹುದು.
ಮ್ಯಾಂಚೆಸ್ಟರ್‌ನಲ್ಲಿ 1921 ರಲ್ಲಿ ನಿರ್ಮಿಸಲಾದ ZD-ಸ್ಟೀಮ್ ಎಂಜಿನ್’ನಲ್ಲಿ ರೈಲುಗಳನ್ನು ಓಡಿಸಲಾಯಿತು. ಮೂಲ ಎಂಜಿನ್ ಅನ್ನು ಏಪ್ರಿಲ್ 15, 1994 ರಂದು ಹಿಂತೆಗೆದುಕೊಂದು ಅದನ್ನು ಡೀಸೆಲ್ ಎಂಜಿನ್‌ನೊಂದಿಗೆ ಬದಲಾಯಿಸಲಾಯಿತು.
ಶಕುಂತಲಾ ರೈಲ್ವೇಸ್ ಅನ್ನು ಕಿಲಿಕ್-ನಿಕ್ಸನ್ ಎಂಬ ಖಾಸಗಿ ಬ್ರಿಟಿಷ್ ಸಂಸ್ಥೆಯು 1910 ರಲ್ಲಿ ಸ್ಥಾಪಿಸಿತು. ಕಂಪನಿಯು ಭಾರತದಲ್ಲಿ ವಸಾಹತುಶಾಹಿ ಬ್ರಿಟಿಷ್ ಸರ್ಕಾರದೊಂದಿಗೆ ಜಂಟಿ ಉದ್ಯಮವನ್ನು ಪ್ರಾರಂಭಿಸಿ, ಸೆಂಟ್ರಲ್ ಪ್ರಾವಿನ್ಸ್ ರೈಲ್ವೇ ಕಂಪನಿಯನ್ನು (CPRC) ರಚಿಸಿತು.
ಯವತ್ಮಾಲ್‌ನಿಂದ ಮುಂಬೈಗೆ (ಬಾಂಬೆ) ಮುಖ್ಯ ಮಾರ್ಗಕ್ಕೆ ಹತ್ತಿಯನ್ನು ಸಾಗಿಸಲು ನ್ಯಾರೋ ಗೇಜ್ ಮಾರ್ಗವನ್ನು ನಿರ್ಮಿಸಲಾಯಿತು, ಅಲ್ಲಿಂದ ಅದನ್ನು ಇಂಗ್ಲೆಂಡ್‌ನ ಮ್ಯಾಂಚೆಸ್ಟರ್’ಗೆ ಸಾಗಿಸಲಾಯಿತು. ಅಂತಿಮವಾಗಿ ಈ ಮಾರ್ಗವನ್ನು ಪ್ರಯಾಣಿಕರ ಪ್ರಯಾಣಕ್ಕೆ ಬಳಸಲಾಯಿತು.
ಆಶ್ಚರ್ಯಕರ ಸಂಗತಿಯೆಂದರೆ, ಬ್ರಿಟಿಷ್ ಕಂಪನಿಯು ತನ್ನ ಹಳಿಗಳ ಮೇಲೆ ರೈಲು ಓಡಿಸಲು ಭಾರತೀಯ ರೈಲ್ವೆಯಿಂದ ಇನ್ನೂ 1 ಕೋಟಿ ರೂಪಾಯಿಗಳಿಗಿಂತ ಹೆಚ್ಚು ಹಣವನ್ನು ಪಡೆಯುತ್ತದೆ. ಅದೂ ಕೂಡ ತೆರಿಗೆ ರೂಪದಲ್ಲಿ ಎಂದು ಹೇಳಲಾಗುತ್ತದೆ.
ರೈಲ್ವೇ ಇಂಜಿನ್ ಅನ್ನು ಗಾಡಿಗಳಿಂದ
ಬೇರ್ಪಡಿಸುವುದರಿಂದ ಹಿಡಿದು ಸಿಗ್ನಲಿಂಗ್ ಮತ್ತು ಟಿಕೆಟ್ ಮಾರಾಟದವರೆಗೆ ಎಲ್ಲಾ ರೈಲ್ವೆ
ಕಾರ್ಯಗಳನ್ನು ಸಿಬ್ಬಂದಿಗಳು ಕೈಯಿಂದಲೇ ನಿರ್ವಹಿಸುತ್ತಾರಂತೆ. ಇತ್ತೀಚೆಗೆ ಕೇಂದ್ರ
ರೈಲ್ವೇ ಸಚಿವ ಸುರೇಶ್ ಪ್ರಭು ಅವರು ನ್ಯಾರೋ ಗೇಜ್ ಯವತ್ಮಲ್-ಮೂರ್ತಿಜಾಪುರ-ಅಚಲಪುರ
ರೈಲು ಮಾರ್ಗವನ್ನು ಬ್ರಾಡ್ ಗೇಜ್ ಆಗಿ ಪರಿವರ್ತಿಸಲು 1,500 ಕೋಟಿ ಮಂಜೂರು ಮಾಡಿದ್ದರು.