ನಾಗ್ಪುರ: ಬಾಲಿವುಡ್ ಜನಪ್ರಿಯ ನಟರಾದ ಅಮಿತಾಭ್ ಬಚ್ಚನ್, ಧರ್ಮೇಂದ್ರ ಮತ್ತು ಕೈಗಾರಿಕೋದ್ಯಮಿ ಮುಕೇಶ್ ಅಂಬಾನಿ ಅವರ ಬಂಗಲೆಗಳನ್ನು ಸ್ಫೋಟಿಸಲಾಗುವುದು ಎಂಬ ದೂರವಾಣಿ ಕರೆ ಮಂಗಳವಾರ ಇಲ್ಲಿನ ಪೊಲೀಸ್ ನಿಯಂತ್ರಣ ಕೊಠಡಿಗೆ ಬಂದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮುಂಬೈ ಬಳಿಯ ಪಾಲ್ಘರ್‌ನ ಶಿವಾಜಿ ನಗರ ಪ್ರದೇಶದಿಂದ ಈ ಕರೆ ಬಂದಿದೆ ಎಂದು ಪತ್ತೆಹಚ್ಚಲಾಗಿದ್ದು, ಈ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅವರು ಹೇಳಿದರು.
ನಾಗ್ಪುರದ ಲಕಡ್ಗಂಜ್ ಪ್ರದೇಶದಲ್ಲಿನ 112 ಸಹಾಯವಾಣಿಯ ನಿಯಂತ್ರಣ ಕೊಠಡಿಗೆ ಕರೆ ಬಂದಿದೆ. ಬಚ್ಚನ್, ಧರ್ಮೇಂದ್ರ ಮತ್ತು ಅಂಬಾನಿ ಬಂಗಲೆಗಳನ್ನು ಸ್ಫೋಟಿಸಲು 25 ಜನರು ಮುಂಬೈಗೆ ಬಂದಿದ್ದಾರೆ ಎಂದು ಕರೆ ಸ್ವೀಕರಿಸಿದವರ ಬಳಿ ಅಪರಿಚಿತ ಹೇಳಿದ್ದಾನೆ.
ಮುಂಬೈ ಪೊಲೀಸರಿಗೆ ಎಚ್ಚರಿಕೆ ನೀಡಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ. ಇದೊಂದು ಹುಸಿ ಕರೆಯಾಗಿರಬಹುದೆಂಬ ಶಂಕೆಯಿದ್ದರೂ ಕೂಡ ಕರೆಯನ್ನು ನಿರ್ಲಕ್ಷಿಸುವಂತಿಲ್ಲ. ಹೀಗಾಗಿ ಈ ಬಗ್ಗೆ ಪೊಲೀಸರು ಮುನ್ನೆಚ್ಚರಿಕೆ ವಹಿಸಿದ್ದಾರೆ. ತನಿಖೆ ವೇಳೆ ಈ ಕರೆ ಹುಸಿ ಎಂದು ಮೆಲ್ನೋಟಕ್ಕೆ ಕಂಡುಬಂದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.