ಪಟ್ನಾ: ಬಿಹಾರದ ಗಯಾ ಜಿಲ್ಲೆಯ ಫೈರಿಂಗ್ ವಲಯದಲ್ಲಿ ಬುಧವಾರ ಬೆಳಿಗ್ಗೆ 'ಮಾರ್ಟರ್ ಶೆಲ್' ಹಾರಿಸಲಾಗಿಲ್ಲ ಎಂದು ಬಿಹಾರದ ಹಿರಿಯ ಸೇನಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಗಯಾದಲ್ಲಿ ಬುಧವಾರ ಮೂವರು ಗ್ರಾಮಸ್ಥರು ಮೃತಪಡಲು ಮಾರ್ಟರ್ ಶೆಲ್ ಸ್ಫೋಟ ಕಾರಣ ಎಂಬ ಆರೋಪ ಮಾಡಲಾಗಿತ್ತು.
'ಮಾರ್ಚ್ 8ರಂದು ಡ್ಯೂರಿ ಡುಮ್ರಿ ವಲಯದಲ್ಲಿ ಯಾವುದೇ ಮಾರ್ಟರ್ ಶೆಲ್ ಹಾರಿಸಲಾಗಿಲ್ಲ. ಫೈರಿಂಗ್ ಮಾಡುವ ಮೊದಲು ಸ್ಥಳೀಯ ಆಡಳಿತದವರು ಮತ್ತು ಪೊಲೀಸರಿಗೆ ತಿಳಿಸುವ ಪರಿಪಾಠ ಇದ್ದು, ಅಂತಹ ಯಾವ ಮಾಹಿತಿಯನ್ನೂ ನೀಡಿಲ್ಲ. ಹೀಗಾಗಿ ಮಾರ್ಟ್‌ರ್ ಫೈರಿಂಗ್ ನಡೆದಿಲ್ಲ ಎಂಬುದು ಸ್ಪಷ್ಟ' ಎಂದು ದಾನಪುರ ಕಂಟೋನ್ಮೆಂಟ್‌ನ ಕಮಾಂಡೆಂಟ್ ಕರ್ನಲ್ ದುಶ್ಯಂತ್ ಸಿಂಗ್ ಚೌಹಾಣ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಫೈರಿಂಗ್ ನಡೆಯುವ ಪ್ರದೇಶದಲ್ಲಿ ಅನಧಿಕೃತವಾಗಿ ಗುಜರಿ ಸಾಮಗ್ರಿಗಳನ್ನು ಹೆಕ್ಕುವ ಪರಿಪಾಠ ನಡೆಯುತ್ತಿದೆ. ಇಂತಹ ಪದ್ಧತಿ ಅಪಾಯಕಾರಿಯಾಗಿದ್ದು, ಹಾಗೆ ಮಾಡದಂತೆ ಸೇನೆ ಮನವಿ ಮಾಡಿಕೊಳ್ಳುತ್ತಿದೆ ಎಂದು ಸೇನೆ ಹೇಳಿಕೆ ನೀಡಿದೆ.
ಈ ಮಧ್ಯೆ, ದುರಂತದ ಬಗ್ಗೆ ಎಲ್ಲಾ ಆಯಾಮಗಳಿಂದಲೂ ತನಿಖೆ ನಡೆಸುವುದಾಗಿ ಜಿಲ್ಲಾಡಳಿತ ತಿಳಿಸಿದೆ.