ಶಿಲ್ಲಾಂಗ್: 'ಮೇಘಾಲಯದ ಮೂರು ವಿಧಾನಸಭೆ ಕ್ಷೇತ್ರಗಳಲ್ಲಿ ಚುನಾವಣೆಯ ನಂತರ ಭುಗಿಲೆದ್ದ ಹಿಂಸಾಚಾರದಿಂದ ಹಲವರು ಗಾಯಗೊಂಡಿದ್ದು, ವ್ಯಕ್ತಿಯೊಬ್ಬ ನಿಗೂಢ ರೀತಿಯಲ್ಲಿ ಸಾವಿಗೀಡಾಗಿದ್ದಾನೆ' ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದರು.
'ಈಸ್ಟರ್ನ್ ವೆಸ್ಟ್ ಖಾಸಿ ಹಿಲ್ಸ್‌ನ ಮರಿಯಾಂಗ್, ಈಸ್ಟ್ ಖಾಸಿ ಹಿಲ್ಸ್‌ನ ಶೆಲ್ಲಾ ಹಾಗೂ ವೆಸ್ಟ್ ಜೈಂತಿಯಾ ಹಿಲ್ಸ್‌ನ ಮೊಕೈಯಾವ್ ವಿಧಾನಸಭಾ ಕ್ಷೇತ್ರಗಳಲ್ಲಿ ಹಿಂಸಾಚಾರದ ಘಟನೆಗಳು ವರದಿಯಾಗಿವೆ. ಈ ಪ್ರದೇಶಗಳಲ್ಲಿ ಸೆಕ್ಷನ್ 144ರ ಅಡಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ' ಎಂದು ಅವರು ಹೇಳಿದರು.
'ಮರಿಯಾಂಗ್‌ನ ಡೆಪ್ಯುಟಿ ಕಮಿಷನರ್ ಕಚೇರಿ ಆವರಣದಲ್ಲಿ ನಿಲ್ಲಿಸಲಾಗಿದ್ದ ಅನೇಕ ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ. ಹಿಂಸಾತ್ಮಕ ಗುಂಪನ್ನು ಚದುರಿಸುವುದಕ್ಕಾಗಿ ಗುರುವಾರ ರಾತ್ರಿ ಅಶ್ರುವಾಯು ಸಿಡಿಸಲಾಗಿದೆ' ಎಂದು ಈಸ್ಟರ್ನ್ ವೆಸ್ಟ್ ಖಾಸಿ ಹಿಲ್ಸ್ ಜಿಲ್ಲೆಯ ಹಿರಿಯ ಅಧಿಕಾರಿಯೊಬ್ಬರು ಸುದ್ದಿಸಂಸ್ಥೆಗೆ ಮಾಹಿತಿ ನೀಡಿದ್ದಾರೆ.
ಮರಿಯಾಂಗ್ ವಿಧಾನಸಭಾ ಕ್ಷೇತ್ರದ ಚುನಾವಣೆ ಫಲಿತಾಂಶದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ, ಕಾಂಗ್ರೆಸ್ ಬೆಂಬಲಿಗರು ಗುರುವಾರ ಜಿಲ್ಲಾಧಿಕಾರಿ ಕಚೇರಿಗೆ ಘೇರಾವ್ ಹಾಕಿದ ಬೆನ್ನಲ್ಲೇ ಈ ಘಟನೆ ನಡೆದಿದೆ.
ಈಸ್ಟ್ ಖಾಸಿ ಹಿಲ್ಸ್‌ನ ಶೆಲ್ಲಾದ ಚುನಾವಣೆ ಫಲಿತಾಂಶದ ಬಳಿಕ, ಅಸಮಾಧಾನಗೊಂಡ ನ್ಯಾಷನಲ್ ಪೀಪಲ್ಸ್ ಪಾರ್ಟಿಯ (ಎನ್‌ಪಿಪಿ) ಬೆಂಬಲಿಗರು ಸೊಹ್ರಾ ಪ್ರದೇಶದ ಉಪವಿಭಾಗಾಧಿಕಾರಿ ಕಚೇರಿ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ.
'ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಈ ಪ್ರದೇಶದಲ್ಲಿ ಹೆಚ್ಚುವರಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ' ಎಂದು ಈಸ್ಟ್ ಖಾಸಿ ಹಿಲ್ಸ್ ಎಸ್‌ಪಿ ಎಂ.ಜಿ.ಆರ್. ಕುಮಾರ್ ಹೇಳಿದ್ದಾರೆ.
ಪಶ್ಚಿಮ ಜೈಂತಿಯಾ ಜಿಲ್ಲೆಯಲ್ಲಿ ಚುನಾವಣೆ ಫಲಿತಾಂಶ ಪ್ರಕಟವಾದ ಬಳಿಕ ಸಹಸ್ನಿಯಾಂಗ್ ಎಂಬ ಹಳ್ಳಿಯಲ್ಲಿ ಎರಡು ಗುಂಪುಗಳ ಮಧ್ಯೆ ಘರ್ಷಣೆ ನಡೆದಿದೆ. ಇದರ ಬೆನ್ನಲ್ಲೇ ಸಹಸ್ನಿಯಾಂಗ್‌ನಲ್ಲಿ ಕರ್ಫ್ಯೂ ವಿಧಿಸಿರುವುದಾಗಿ ಸ್ಥಳೀಯ ಆಡಳಿತ ಆದೇಶ ಹೊರಡಿಸಿದೆ.