ನವದೆಹಲಿ: ರಾಹುಲ್ ಗಾಂಧಿ ನಿಂದನೆ ಮಾಡಿದ್ದರೆ ಕಾನೂನು ತನ್ನ ಕೆಲಸ ಮಾಡಲಿದೆ ಎಂದು ಬಿಜೆಪಿ ಮುಖಂಡ ಮತ್ತು ಕೇಂದ್ರದ ಮಾಜಿ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದಾರೆ.
ರಾಹುಲ್ ಗಾಂಧಿ ದೋಷಿ ಎಂಬ ಸೂರತ್ ನ್ಯಾಯಾಲಯದ ತೀರ್ಪಿನ ವಿರುದ್ಧ ಟೀಕೆ ಮಾಡುತ್ತಿರುವ ಕಾಂಗ್ರೆಸ್ ನಾಯಕರನ್ನು ತರಾಟೆಗೆ ತೆಗೆದುಕೊಂಡಿರುವ ಅವರು, ಬೇರೆಯವರನ್ನು ನಿಂದಿಸಲು ರಾಹುಲ್ ಗಾಂಧಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಬೇಕು ಎಂದು ವಿರೋಧ ಪಕ್ಷ ಬಯಸುತ್ತಿದೆಯೇ? ಎಂದು ಅವರು ಪ್ರಶ್ನಿಸಿದ್ದಾರೆ.
ಪ್ರಕರಣ ಕುರಿತಂತೆ ವಿಚಾರಣೆ ನಡೆಸುತ್ತಿದ್ದ ಹಲವು ನ್ಯಾಯಾಧೀಶರನ್ನು ಬದಲಿಸಲಾಗಿದೆ ಎಂದು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಹೇಳಿದ್ದಾರೆ ಎನ್ನಲಾದ ವರದಿ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ನ್ಯಾಯಾಂಗ ವ್ಯವಸ್ಥೆ ಮೇಲೆ ಕಾಂಗ್ರೆಸ್ ಪಕ್ಷಕ್ಕೆ ನಂಬಿಕೆ ಇಲ್ಲ ಎಂಬುದನ್ನು ಇದು ತೋರಿಸುತ್ತದೆ. ಆ ಪಕ್ಷ ನ್ಯಾಯಾಂಗವನ್ನೂ ತನ್ನ ಕಿಸೆಯಲ್ಲಿ ಇಟ್ಟುಕೊಳ್ಳಲು ಬಯಸುತ್ತಿದೆಯೇ? ಎಂದು ರವಿಶಂಕರ್ ಪ್ರಶ್ನಿಸಿದ್ದಾರೆ.
ಈ ತೀರ್ಪಿನಿಂದಾಗಿ ರಾಹುಲ್ ಗಾಂಧಿ, ಲೋಕಸಭಾ ಸದಸ್ಯತ್ವದಿಂದ ಅನರ್ಹರಾಗುತ್ತಾರೆಯೇ ಎಂದು ಪ್ರತ್ರಕರ್ತರು ಕೇಳಿದ ಪ್ರಶ್ನೆಗೆ, ಅದನ್ನು ಸ್ಪೀಕರ್ ಓಂ ಬಿರ್ಲಾ ನಿರ್ಧರಿಸುತ್ತಾರೆ ಎಂದು ರವಿಶಂಕರ್ ಹೇಳಿದ್ದಾರೆ.
ಮೋದಿ ಉಪನಾಮ ಟೀಕೆಗೆ ಸಂಬಂಧಿಸಿದಂತೆ ಗುಜರಾತ್ನ ಸೂರತ್ ನ್ಯಾಯಾಲಯ, ರಾಹುಲ್ ಗಾಂಧಿಗೆ 2 ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ನಂತರ, 30 ದಿನಗಳವರೆಗೆ ಶಿಕ್ಷೆಯನ್ನು ಅಮಾನತಿನಲ್ಲಿಟ್ಟು, ಜಾಮೀನು ಮಂಜೂರು ಮಾಡಲಾಗಿದೆ.
2019ರ ಲೋಕಸಭೆ ಚುನಾವಣೆ ಪ್ರಚಾರದ ವೇಳೆ ಕರ್ನಾಟಕದ ಕೋಲಾರದ ರ‍್ಯಾಲಿಯಲ್ಲಿ 'ಕಳ್ಳರೆಲ್ಲರಿಗೂ ಸಾಮಾನ್ಯವಾಗಿ ಮೋದಿ ಎಂಬ ಉಪನಾಮವೇ ಏಕಿರುತ್ತದೆ'ಎಂದು ರಾಹುಲ್ ವ್ಯಂಗ್ಯವಾಡಿದ್ದರು.
ಮೋದಿ ಉಪನಾಮ ಹೊಂದಿರುವ ಜನರನ್ನು ರಾಹುಲ್ ಅವಮಾನಿಸಿದ್ದಾರೆ. ಇದು ಅತ್ಯಂತ ದೊಡ್ಡ ಮಾನಹಾನಿ ಎಂದು ರವಿಶಂಕರ್ ಪ್ರಸಾದ್ ಹೇಳಿದ್ದಾರೆ. ರಾಹುಲ್ ಪರ ವಕೀಲರೂ ವಾದ ಮಂಡಿಸಿದ್ದಾರೆ. ಆ ಬಳಿಕವೇ ನ್ಯಾಯಾಲಯ ತೀರ್ಪು ನೀಡಿದೆ. ಬಿಜೆಪಿ ನಾಯಕ ಸುಶೀಲ್ ಮೋದಿ ದಾಖಲಿಸಿರುವ ಇಂತಹದ್ದೇ ಮತ್ತೊಂದು ಪ್ರಕರಣ ಪಾಟ್ನಾ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದೆ ಎಂದೂ ಅವರು ಹೇಳಿದ್ದಾರೆ.