ನವದೆಹಲಿ(PTI): ಆಪ್ಟಿಕಲ್ ಫೈಬರ್ ಕೇಬಲ್ ಗಳಂತಹ ಭೂಗತ ಸೌಲಭ್ಯಗಳಿಗೆ ಹಾನಿಯುಂಟಾಗುವುದನ್ನು ತಡೆಯಲು ಅಗೆಯುವಿಕೆ ಕಾರ್ಯವನ್ನು ನಿರ್ವಹಿಸುವ ಏಜೆನ್ಸಿಗಳು ಮತ್ತು ಇಂತಹ ಸೌಲಭ್ಯಗಳ ಮಾಲಕರ ನಡುವೆ ಸಮನ್ವಯವನ್ನು ಕಲ್ಪಿಸಲು 'ಕಾಲ್ ಬಿಫೋರ್ ಯು ಡಿಗ್ (ನೀವು ಅಗೆಯುವ ಮುನ್ನ ಕರೆ ಮಾಡಿ)' ಆಯಪ್ ಗೆ ಪ್ರಧಾನಿ ನರೇಂದ್ರ ಮೋದಿಯವರು ಬುಧವಾರ ಚಾಲನೆ ನೀಡಿದರು.
► ಈ ಆಯಪ್ ಏಕೆ ಅಗತ್ಯ?
ದೂರಸಂಪರ್ಕ ಇಲಾಖೆಯ ಉಪಕ್ರಮವಾಗಿರುವ ಈ ಆಯಪ್ ಸಮನ್ವಯವಿಲ್ಲದ ಅಗೆಯುವಿಕೆ ಮತ್ತು ಉತ್ಖನನದಿಂದ ಭೂಗತ ಕೇಬಲ್ ಇತ್ಯಾದಿಗಳಿಗೆ ಹಾನಿಯುಂಟಾಗುವುದನ್ನು ತಡೆಯುವ ಉದ್ದೇಶವನ್ನು ಹೊಂದಿದೆ. ಅನಿಯಂತ್ರಿತ ಅಗೆಯುವಿಕೆಯಿಂದ ಪ್ರತಿ ವರ್ಷ 3,000 ಕೋ.ರೂ.ಗೂ ಅಧಿಕ ನಷ್ಟ ಸಂಭವಿಸುತ್ತಿದೆ. ಆಯಪ್ ಸಂಭಾವ್ಯ ವ್ಯವಹಾರ ನಷ್ಟಗಳಿಂದ ರಕ್ಷಿಸುತ್ತದೆ ಮತ್ತು ರಸ್ತೆ,ದೂರಸಂಪರ್ಕ, ನೀರು,ಅನಿಲ ಮತ್ತು ವಿದ್ಯುತ್ನಂತಹ ಅಗತ್ಯ ಸೇವೆಗಳಲ್ಲಿ ವ್ಯತ್ಯಯಗಳನ್ನು ತಗ್ಗಿಸುವ ಮೂಲಕ ಸಾರ್ವಜನಿಕರಿಗೆ ಅನಾನುಕೂಲತೆಗಳನ್ನು ಕನಿಷ್ಠಗೊಳಿಸುತ್ತದೆ.
► ಆಯಪ್ ಹೇಗೆ ಕೆಲಸ ಮಾಡುತ್ತದೆ?
ಭೂಗತ ಆಸ್ತಿಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವ ಜೊತೆಗೆ ಉತ್ಖನನಗಳು ಯೋಜಿತ ರೀತಿಯಲ್ಲಿ ನಡೆಯುವಂತಾಗಲು ಈ ಆಯಪ್ ಎಸ್‌ಎಂಎಸ್/ಇ-ಮೇಲ್ ಮತ್ತು ಕ್ಲಿಕ್-ಟು-ಕಾಲ್ ಮೂಲಕ ಅಗೆಯುವವರು ಮತ್ತು ಆಸ್ತಿಗಳ ಮಾಲಕರ ನಡುವೆ ಸಂಪರ್ಕವನ್ನು ಕಲ್ಪಿಸುತ್ತದೆ. ಆಯಪ್ ಉತ್ಖನನ ಕಂಪನಿಗಳಿಗೆ ಒದಗಿಸುವ ಸಂಪರ್ಕ ಸಂಖ್ಯೆ ಮೂಲಕ ಅವು ಅಗೆಯುವಿಕೆಯನ್ನು ಆರಂಭಿಸುವ ಮುನ್ನ ಭೂಗತ ಕೇಬಲ್ ಇತ್ಯಾದಿಗಳ ಬಗ್ಗೆ ಮಾಹಿತಿಗಳನ್ನು ಪಡೆದುಕೊಳ್ಳಬಹುದು. ಆಸ್ತಿಗಳ ಮಾಲಿಕರೂ ಸ್ಥಳದಲ್ಲಿ ನಡೆಯಲಿರುವ ಕಾಮಗಾರಿಯ ಬಗ್ಗೆ ತಿಳಿದುಕೊಳ್ಳಬಹುದು.
► 6ಜಿ ವಿಷನ್ ಡಾಕ್ಯುಮೆಂಟ್ ಅನಾವರಣ
ಬುಧವಾರ
'ಕಾಲ್ ಬಿಫೋರ್ ಯು ಡಿಗ್ 'ಆಯಪ್ಗೆ ಚಾಲನೆ ನೀಡುವ ಜೊತೆಗೆ ಪ್ರಧಾನಿ 6ಜಿ ವಿಷನ್
ಡಾಕ್ಯುಮೆಂಟ್ನ್ನು ಅನಾವರಣಗೊಳಿಸಿದರು. ಇದೇ ವೇಳೆ ವಿಶ್ವಸಂಸ್ಥೆಯ ನೂತನ
ಇಂಟರ್ನ್ಯಾಷನಲ್ ಟೆಲಿಕಮ್ಯುನಿಕೇಷನ್ ಯೂನಿಯನ್ (ಐಟಿಯು) ಪ್ರಾದೇಶಿಕ ಕಚೇರಿ ಮತ್ತು
ಇನ್ನೊವೇಷನ್ ಸೆಂಟರ್ ಅನ್ನೂ ಅವರು ಉದ್ಘಾಟಿಸಿದರು. ಐಟಿಯು ಮಾಹಿತಿ ಮತ್ತು ಸಂವಹನ
ತಂತ್ರಜ್ಞಾನಗಳಿಗಾಗಿ ಪರಿಣಿತ ಏಜೆನ್ಸಿಯಾಗಿದ್ದು, ಜಿನಿವಾದಲ್ಲಿ ಕೇಂದ್ರ ಕಚೇರಿಯನ್ನು
ಹೊಂದಿದೆ.
6ಜಿ ಟೆಸ್ಟ್ ಬೆಡ್ ಅನ್ನೂ ಮೋದಿ ಉದ್ಘಾಟಿಸಿದರು.