ನವದೆಹಲಿ : ಬಹುಕೋಟಿ ವಂಚನೆ ಹಗರಣಕ್ಕೆ ಸಂಬಂಧಿಸಿದಂತೆ ಫಿಜಿಯಿಂದ ಗಡಿಪಾರು ಮಾಡಲಾದ ಪರ್ಲ್ಸ್ ಗ್ರೂಪ್‌ನ ನಿರ್ದೇಶಕ ಹರ್ಚಂದ್ ಸಿಂಗ್ ಗಿಲ್ ಅವರನ್ನು ಸಿಬಿಐ ಬಂಧಿಸಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.
ದೇಶದಿಂದ ಪಲಾಯನ ಮಾಡಿ ವಿದೇಶದಲ್ಲಿ ನೆಲೆಸಿರುವವರನ್ನು ಮರಳಿ ಭಾರತಕ್ಕೆ ಕರೆತರಲು ಕೇಂದ್ರೀಯ ತನಿಖಾ ದಳ (ಸಿಬಿಐ) ಆರಂಭಿಸಿದ 'ಆಪರೇಷನ್ ತ್ರಿಶೂಲ್' ಅಡಿಯಲ್ಲಿ ಫಿಜಿಯಿಂದ ಗಡಿಪಾರು ಮಾಡಿದ ನಂತರ ಗಿಲ್ ಅವರನ್ನು ಸೋಮವಾರ ರಾತ್ರಿ ಭಾರತಕ್ಕೆ ಕರೆತರಲಾಗಿದೆ.
ಕಳೆದ ವರ್ಷ ಪ್ರಾರಂಭವಾದ ಕಾರ್ಯಾಚರಣೆ ಅಡಿಯಲ್ಲಿ ಈವರೆಗೆ ಪಲಾಯನ ಮಾಡಿದವರಲ್ಲಿ ಸುಮಾರು 30 ಮಂದಿಯನ್ನು ಯಶಸ್ವಿಯಾಗಿ ಭಾರತಕ್ಕೆ ಕರೆತರಲಾಗಿದೆ ಎಂದು ಸಿಬಿಐ ಹೇಳಿದೆ.
ಪರ್ಲ್ಸ್ ಗ್ರೂಪ್ ಮತ್ತು ಅದರ ಸಂಸ್ಥಾಪಕ ನಿರ್ಮಲ್ ಸಿಂಗ್ ಭಂಗೂ ವಿರುದ್ಧ 2014ರ ಫೆಬ್ರವರಿ 19ರಂದು ಸಿಬಿಐ ತನಿಖೆ ಪ್ರಾರಂಭಿಸಿತು. ಹೂಡಿಕೆದಾರರಿಗೆ ತಮ್ಮ ಹೂಡಿಕೆಗೆ ಪ್ರತಿಯಾಗಿ ಭೂಮಿಯನ್ನು ನೀಡುವ ಭರವಸೆ ನೀಡಿ ಕೋಟಿಗಟ್ಟಲೆ ವಂಚಿಸಿದ ಆರೋಪ ಇವರ ಮೇಲಿದೆ. ದೇಶಾದ್ಯಂತ ಕಂಪನಿಯು ₹ 60,000 ಕೋಟಿಗೂ ಹೆಚ್ಚು ಹಣವನ್ನು ವಂಚಿಸಿದೆ ಎಂದು ಸಿಬಿಐ ಆರೋಪಿಸಿದೆ.