ನವದೆಹಲಿ: ಕೋವಿಡ್- 19 ಮತ್ತು ಇನ್ಫ್ಲುಯೆಂಜಾ ಪ್ರಕರಣಗಳ ಏರಿಕೆ ನಡುವೆ ಆಸ್ಪತ್ರೆಗಳಲ್ಲಿನ ಸಿದ್ಧತೆ ಕುರಿತು ಪರಿಶೀಲಿಸಲು ಏಪ್ರಿಲ್ 10 ಮತ್ತು 10 ರಂದು ದೇಶಾದ್ಯಂತ ಕೋವಿಡ್ ನಿರ್ವಹಣಾ ಅಣಕು ಕಾರ್ಯಾಚರಣೆ ನಡೆಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.
ಆಸ್ಪತ್ರೆಗಳಲ್ಲಿರುವ ಹಾಸಿಗೆಗಳು, ವೈದ್ಯಕೀಯ ಸಲಕರಣೆಗಳು ಮತ್ತು ವೈದ್ಯಕೀಯ ಆಕ್ಸಿಜನ್ , ಔಷಧಗಳ ಲಭ್ಯತೆಯನ್ನು ಪರಿಶೀಲಿಸುವ ಗುರಿಯೊಂದಿಗೆ ನಡೆಸಲಾಗುವ ಈ ಕಾರ್ಯಾಚರಣೆಯಲ್ಲಿ ಸರ್ಕಾರಿ ಮತ್ತು ಖಾಸಗಿ ಆರೋಗ್ಯ ಕೇಂದ್ರಗಳು ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮತ್ತು ಭಾರತೀಯ ವೈದ್ಯಕೀಯ ಸಂಶೋಧನಾ ಸಮಿತಿ(ಐಸಿಎಂಆರ್) ಗುರುವಾರ ಹೊರಡಿಸಿರುವ ಜಂಟಿ ಮಾರ್ಗಸೂಚಿಯಲ್ಲಿ ಹೇಳಲಾಗಿದೆ.
ಈ ಸಂಬಂಧ ಮಾರ್ಚ್ 27 ರಂದು ನಡೆಯಲಿರುವ ವರ್ಚುಯಲ್ ಸಭೆಯಲ್ಲಿ ಅಣಕು ಕಾರ್ಯಾಚರಣೆ ಕುರಿತು ಎಲ್ಲಾ ರಾಜ್ಯಗಳಿಗೆ ಸಮಗ್ರ ಮಾಹಿತಿಯನ್ನು ಒದಗಿಸಲಾಗುವುದು ಎಂದು ತಿಳಿಸಲಾಗಿದೆ.
ಕಳೆದ ಕೆಲವು ವಾರಗಳಲ್ಲಿ ಕೆಲವು ರಾಜ್ಯಗಳಲ್ಲಿ ಕೋವಿಡ್-19 ಪರೀಕ್ಷೆ ಕ್ಷೀಣಿಸಿದ್ದು, ವಿಶ್ವ ಆರೋಗ್ಯ ಸಂಸ್ಥೆ ನೀಡಿರುವ ಪರೀಕ್ಷೆ ಪ್ರಮಾಣಕ್ಕೆ ಹೋಲಿಸಿದರೆ ಪ್ರಸ್ತುತ ಪರೀಕ್ಷೆ ಪ್ರಮಾಣ ಸೂಕ್ತವಾಗಲಿಲ್ಲ. ಜಿಲ್ಲಾ ಮತ್ತು ಬ್ಲಾಕ್ ಮಟ್ಟದಲ್ಲೂ ಪರೀಕ್ಷೆ ಪ್ರಮಾಣ ಆತಂಕವನ್ನುಂಟು ಮಾಡಿದೆ ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.