ನವದೆಹಲಿ: ಭಾರತವು ರಷ್ಯಾದಿಂದ ಫೆಬ್ರುವರಿಯಲ್ಲಿ ಪ್ರತಿ ದಿನ 1.6 ಮಿಲಿಯನ್ ಬ್ಯಾರಲ್‌ಗಳಷ್ಟು ತೈಲ ಆಮದು ಮಾಡಿಕೊಂಡಿದೆ. ಈ ಮೂಲಕ ದೇಶದ ಸಾಂಪ್ರದಾಯಿಕ ತೈಲ ಪೂರೈಕೆದಾರರಾದ ಇರಾಕ್, ಸೌದಿ ಅರೇಬಿಯಾ ಹಾಗೂ ಅಮೆರಿಕವನ್ನು ರಷ್ಯಾ ಹಿಂದಿಕ್ಕಿದೆ.
'ದೇಶದ ಕಚ್ಚಾ ತೈಲದ ಒಟ್ಟು ಆಮದಿನಲ್ಲಿ ಕಾಲು ಭಾಗಕ್ಕಿಂತಲೂ ಅಧಿಕ ಪ್ರಮಾಣದ ತೈಲವನ್ನು ಭಾರತವು ರಷ್ಯಾದಿಂದ ಆಮದು ಮಾಡಿಕೊಳ್ಳುತ್ತಿದೆ. ಈ ಮೂಲಕ ಪೆಟ್ರೋಲ್, ಡೀಸೆಲ್ ಆಗಿ ಪರಿವರ್ತಿಸಬಲ್ಲ ಕಚ್ಚಾ ತೈಲದ ಏಕೈಕ ಅತಿ ದೊಡ್ಡ ಪೂರೈಕೆದಾರನಾಗಿ ರಷ್ಯಾ ಮುಂದುವರಿದಿದೆ' ಎಂದು ಇಂಧನ ಪೂರೈಕೆ ಮಾಹಿತಿ ಒದಗಿಸುವ ವೆಬ್‌ಸೈಟ್ ವೋರ್ಟೆಕ್ಸಾ ತಿಳಿಸಿದೆ.
ಆಮದು ಏರಲು ರಷ್ಯಾದ ತೈಲ ರಫ್ತು ದರದಲ್ಲಿನ ರಿಯಾಯಿತಿ ಕೂಡ ಕಾರಣವಾಗಿದೆ.
ರಷ್ಯಾ-ಉಕ್ರೇನ್ ಯುದ್ಧದ ಮೊದಲು ಮಾರುಕಟ್ಟೆಯ ಹಂಚಿಕೆಯಲ್ಲಿ ಪ್ರತಿ ದಿನ ಶೇ. 1ಕ್ಕಿಂತ ಕಡಿಮೆ ಪ್ರಮಾಣದಲ್ಲಿ ಭಾರತವು ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳುತ್ತಿತ್ತು. ಆದರೆ, ಈಗ ಅದರ ಪ್ರಮಾಣ ಶೇ. 35ಕ್ಕೆ ಏರಿದೆ.
ಫೆಬ್ರುವರಿಯಲ್ಲಿ ಇರಾಕ್‌ನಿಂದ ಪ್ರತಿದಿನ 9,39,921 ಬ್ಯಾರಲ್ ತೈಲ ಪೂರೈಕೆಯಾದರೆ ಸೌದಿ ಅರೇಬಿಯಾದಿಂದ 6,47,813 ಬ್ಯಾರಲ್ ತೈಲ ಸರಬರಾಜು ಆಗಿರುತ್ತದೆ.
ರಷ್ಯಾದಿಂದ ಆಮದು ಹೆಚ್ಚಿಸಿದ ಮೇಲೆ ದೇಶದ ನಾಲ್ಕನೇ ಅತಿ ದೊಡ್ಡ ತೈಲ ಪೂರೈಕೆದಾರ ಅಮೆರಿಕಾದಿಂದ ಶೇ. 38 ಹಾಗೂ ಮೂರನೇ ಅತಿ ದೊಡ್ಡ ಪೂರೈಕೆದಾರ ಸೌದಿಯಿಂದ ಶೇ.16 ರಷ್ಟು ತೈಲ ಆಮದು ಪ್ರಮಾಣವನ್ನು ಭಾರತ ಇಳಿಸಿದೆ, ಎಂದು ವೋರ್ಟೆಕ್ಸಾ ವಿವರಿಸಿದೆ.