ನವದೆಹಲಿ: 'ಸಂಸತ್ತಿನ ಕೆಳಮನೆಯಲ್ಲಿ ಎಲ್ಲ ಸಂಸದರು ಅಭಿವ್ಯಕ್ತಿ ಸ್ವಾತಂತ್ರ್ಯ ಅನುಭವಿಸುತ್ತಿದ್ದಾರೆ' ಎಂದು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬ್ರಿಟನ್ ಪ್ರವಾಸದಲ್ಲಿ ನೀಡಿದ್ದ 'ಪ್ರತಿಪಕ್ಷಗಳ ಸಂಸದರು ಮಾತನಾಡುವಾಗ ಮೈಕ್‌ಗಳು ಸ್ಥಗಿತವಾಗುತ್ತವೆ' ಎಂಬ ಹೇಳಿಕೆಗೆ ಅಂತರರಾಷ್ಟ್ರೀಯ ವೇದಿಕೆಯಲ್ಲಿ ತಿರುಗೇಟು ನೀಡಿದ್ದಾರೆ.
ಬಹರೇನ್‌ನ ಮನಾಮಾದಲ್ಲಿ ಭಾನುವಾರ ಅಂತರ ಸಂಸದೀಯ ಒಕ್ಕೂಟದ 146ನೇ ಅಧಿವೇಶನದ ಸಾಮಾನ್ಯ ಚರ್ಚೆಯಲ್ಲಿ 'ಶಾಂತಿಯುತ ಸಹಬಾಳ್ವೆ ಮತ್ತು ಎಲ್ಲ ಸಮಾಜಗಳನ್ನು ಒಳಗೊಳ್ಳುವಿಕೆ ಉತ್ತೇಜಿಸುವುದು: ಅಸಹಿಷ್ಣುತೆಯ ವಿರುದ್ಧ ಹೋರಾಡುವುದು' ವಿಷಯ ಕುರಿತು ಅವರು ಮಾತನಾಡಿದರು.
ರಾಹುಲ್ ಗಾಂಧಿಯವರ ಟೀಕೆಯಿಂದ ಉದ್ಭವಿಸಿರುವ ರಾಜಕೀಯ ವಿವಾದ ಇನ್ನೂ ತಣ್ಣಗಾಗಿಲ್ಲ ಎನ್ನುವುದು ಸ್ಪೀಕರ್ ಅವರ ಪ್ರತ್ಯುತ್ತರದಿಂದ ಸ್ಪಷ್ಟವಾದಂತಿದೆ. ಆದರೆ, ಬಿರ್ಲಾ ಅವರು ತಮ್ಮ ಭಾಷಣದ ವೇಳೆ ಎಲ್ಲಿಯೂ ರಾಹುಲ್ ಗಾಂಧಿಯವರ ಹೆಸರನ್ನು ಉಲ್ಲೇಖಿಸಲಿಲ್ಲ.
'ಎಲ್ಲ ಸಂಸದರು ಲೋಕಸಭೆಯಲ್ಲಿ ತಮ್ಮ ಅಭಿಪ್ರಾಯ ಮತ್ತು ಆಲೋಚನೆಗಳನ್ನು ಹಂಚಿಕೊಳ್ಳುವ ಮುಕ್ತ ಸ್ವಾತಂತ್ರ್ಯ ಅನುಭವಿಸುತ್ತಿದ್ದಾರೆ. ನಮ್ಮದು ಸದೃಢ ಪ್ರಜಾಪ್ರಭುತ್ವ ವ್ಯವಸ್ಥೆ. ಜನರ ಆಶೋತ್ತರಗಳನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಅಭಿವ್ಯಕ್ತಿಗೊಳಿಸುವ ಬಹು ಪಕ್ಷಗಳ ವ್ಯವಸ್ಥೆ ನಮ್ಮದು. ಸಂಸತ್ತಿನಲ್ಲಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಸಂಸದರಿಗೆ ಯಾವುದೇ ಅಡೆತಡೆಯಿಲ್ಲದ ಹಕ್ಕುಗಳಿವೆ' ಎಂದು ಹೇಳಿದರು.
'ಹವಾಮಾನ ಬದಲಾವಣೆ, ಲಿಂಗ ಸಮಾನತೆ, ಸುಸ್ಥಿರ ಅಭಿವೃದ್ಧಿ ಮತ್ತು ಕೋವಿಡ್ -19 ಸಾಂಕ್ರಾಮಿಕ ರೋಗದಂತಹ ಸಮಕಾಲೀನ ಜಾಗತಿಕ ಸವಾಲುಗಳ ಬಗ್ಗೆ ನಮ್ಮ ದೇಶದ ಸಂಸತ್ತು ಯಾವಾಗಲೂ ವಿಶಾಲ ಮತ್ತು ಅರ್ಥಪೂರ್ಣ ಚರ್ಚೆಗಳನ್ನು ನಡೆಸಿದೆ. ಹಾಗೆಯೇ ಎಲ್ಲ ಜಾಗತಿಕ ಸಮಸ್ಯೆಗಳನ್ನು ಮಾತುಕತೆ ಮೂಲಕ ಶಾಂತಿಯುತವಾಗಿ ಪರಿಹರಿಸಬೇಕೆನ್ನುವುದು ಭಾರತ ದೀರ್ಘ ಕಾಲದಿಂದ ಅನುಸರಿಸಿರುವ ದೃಷ್ಟಿಕೋನವಾಗಿದೆ' ಎಂದು ಬಿರ್ಲಾ ಹೇಳಿದರು.