ನವದೆಹಲಿ: ಲಿಂಗಪರಿವರ್ತಿತರು, ಪುರುಷರ ಜತೆ ಲೈಂಗಿಕ ಕ್ರಿಯೆ ನಡೆಸುವ ಪುರುಷರು (ಎಂಎಸ್‌ಎಂ) ಮತ್ತು ಮಹಿಳಾ ಲೈಂಗಿಕ ಕಾರ್ಯಕರ್ತರು ರಕ್ತದಾನ ಮಾಡುವುದನ್ನು ನಿರ್ಬಂಧಿಸಿರುವ 2017ರ ಮಾರ್ಗಸೂಚಿಗಳನ್ನು ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್‌ನಲ್ಲಿ ಸಮರ್ಥಿಸಿಕೊಂಡಿದೆ.
ಈ ಮಾರ್ಗಸೂಚಿಗಳು ವೈಜ್ಞಾನಿಕ ಪುರಾವೆಗಳನ್ನು ಆಧರಿಸಿದ್ದು, ತಜ್ಞರಿಂದ ಜಾಗತಿಕವಾಗಿ ಮಾನ್ಯತೆ ಪಡೆದಿವೆ ಎಂದು ತಿಳಿಸಿದೆ.
ರಕ್ತ ವರ್ಗಾವಣೆ ವ್ಯವಸ್ಥೆಯು (ಬಿಟಿಎಸ್) ದೇಶದ ರಕ್ತದಾನ ವಿಧಾನವನ್ನು ಅವಲಂಬಿಸಿದೆ. ದೇಶದಾದ್ಯಂತ ಹೊಂದಿಕೆಯಾಗುವ ರೀತಿಯಲ್ಲಿ, ಗುಣಮಟ್ಟದ ಆರೋಗ್ಯ ವ್ಯವಸ್ಥೆಯನ್ನು ಗಮನದಲ್ಲಿ ಇರಿಸಿಕೊಂಡು ನಿಯಮಾವಳಿಗಳನ್ನು ರೂಪಿಸಲಾಗಿದೆ ಎಂದು ತಿಳಿಸಿದೆ. ಸುರಕ್ಷಿತ ರಕ್ತ ಹಾಗೂ ಅದನ್ನು ಸಕಾಲದಲ್ಲಿ ದೊರೆಯುವಂತೆ ಮಾಡುವುದು ಸಾರ್ವಜನಿಕ ಆರೋಗ್ಯ ಕ್ಷೇತ್ರದ ಅತಿದೊಡ್ಡ ಜವಾಬ್ದಾರಿಯಾಗಿದೆ ಎಂದು ಹೇಳಿದೆ.
'ಭಾರತದ ರಕ್ತ ವರ್ಗಾವಣೆ ವ್ಯವಸ್ಥೆಯನ್ನು ಬಲಪಡಿಸಲು ಪೂರಕವಾದ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ರಕ್ತದಾನ ವ್ಯವಸ್ಥೆಯ ಮೇಲೆ ನಂಬಿಕೆ ಇರಿಸಿ, ಅದನ್ನು ಬಳಕೆ ಮಾಡುವ ಜನರಲ್ಲಿ ವಿಶ್ವಾಸವನ್ನು ತುಂಬುವುದು ಇಲ್ಲಿ ಮುಖ್ಯ. ಜೀವವೊಂದು ಸಂಕಷ್ಟದಲ್ಲಿರುವ ಸಮಯದಲ್ಲಿ ರಕ್ತದಾನ ವ್ಯವಸ್ಥೆಯ ಹೊರತು ಜನರಿಗೆ ಬೇರೆ ಆಯ್ಕೆಗಳಿರುವುದು ಕಡಿಮೆ. ಸಂಗ್ರಹಿಸಲಾದ ರಕ್ತದ ಮಾದರಿಯು ಸುರಕ್ಷಿತ ಹಾಗೂ ಪರಿಣಾಮಕಾರಿ ಎಂಬ ಬಗ್ಗೆ ರಕ್ತದಾನ ಮಾಡುವವರು ಹಾಗೂ ರಕ್ತವನ್ನು ಪಡೆಯುವವರು ಸಂಪೂರ್ಣ ವಿಶ್ವಾಸ ಇರಿಸುವುದು ಅಗತ್ಯ' ಎಂದು ಸರ್ಕಾರ ಹೇಳಿದೆ.
ರಕ್ತದಾನ ವಿಚಾರ ಕುರಿತಂತೆ, ಮಣಿಪುರದ ಥಂಗ್‌ಜಮ್ ಸಂತಾ ಸಿಂಗ್ ಎಂಬುವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ್ದ ಕೋರ್ಟ್, 2021ರ ಮಾ.5ರಂದು ಕೇಂದ್ರ ಸರ್ಕಾರಕ್ಕೆ ನೋಟಿಸ್ ನೀಡಿತ್ತು. 2017ರ ಮಾರ್ಗಸೂಚಿಯ ಸಿಂಧುತ್ವವನ್ನು ಅರ್ಜಿಯಲ್ಲಿ ಪ್ರಶ್ನಿಸಲಾಗಿತ್ತು.
ಮಾರ್ಗಸೂಚಿಯಲ್ಲಿ ಗುರುತಿಸಲಾಗಿರುವ ಈ ವರ್ಗದ ಜನರನ್ನು ಎಚ್‌ಐವಿ ಮತ್ತು ಏಡ್ಸ್‌ನ ಸೋಂಕಿಗೆ ಒಳಗಾಗುವ ಅಪಾಯ ಹೆಚ್ಚಿರುವ ವರ್ಗಕ್ಕೆ ಸೇರಿಸಿರುವುದು ಸಂವಿಧಾನದ 14, 15 ಹಾಗೂ 21ನೇ ವಿಧಿಯ ಪ್ರಕಾರ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗುತ್ತದೆ ಎಂದು ಅರ್ಜಿದಾರರು ಪ್ರತಿಪಾದಿಸಿದ್ದರು. ಲಿಂಗ ಹಾಗೂ ಲೈಂಗಿಕತೆ ಆಧಾರದಲ್ಲಿ ತಾರತಮ್ಯ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದರು.
ದುಬಾರಿ ತಂತ್ರಜ್ಞಾನ
'ರಕ್ತ
ವರ್ಗಾವಣೆ ವಿಚಾರದಲ್ಲಿ ಅಭಿವೃದ್ಧಿ ಹೊಂದಿರುವ ದೇಶಗಳ ಪರಿಸ್ಥಿತಿ ಬೇರೆ. ಪಾಶ್ಚಾತ್ಯ
ದೇಶಗಳು ನ್ಯೂಕ್ಲಿಯಿಕ್ ಆಯಸಿಡ್ ಟೆಸ್ಟಿಂಗ್ (ಎನ್‌ಎಟಿ) ವಿಧಾನವನ್ನು ಅನುಸರಿಸುತ್ತವೆ.
ಈ ವಿಧಾನದಿಂದ, ವರ್ಗಾವಣೆಯಿಂದ ಹರಡುವ ಸೋಂಕುಗಳನ್ನು (ಟಿಟಿಐ) ಗಣನೀಯವಾಗಿ ಕಡಿಮೆ
ಮಾಡಬಹುದು. ಭಾರತದಲ್ಲಿ 3,866 ರಕ್ತನಿಧಿ ಕೇಂದ್ರಗಳಲ್ಲಿ ಮಾತ್ರ ಎನ್‌ಎಟಿ ತಂತ್ರಜ್ಞಾನ
ಅಳವಡಿಸಿಕೊಳ್ಳಲಾಗಿದೆ. ಈ ತಂತ್ರಜ್ಞಾನವೂ ದುಬಾರಿ. ಇದನ್ನು ನಿರ್ವಹಿಸಲು ತರಬೇತಿ
ಪಡೆದ ಸಿಬ್ಬಂದಿ ಹಾಗೂ ವಿಶೇಷ ಉಪಕರಣಗಳು, ಸರಿಯಾದ ನಿರ್ವಹಣೆ ಅತ್ಯಗತ್ಯ' ಎಂದು ಕೇಂದ್ರ
ಸರ್ಕಾರ ಹೇಳಿದೆ.