ನವದೆಹಲಿ: ದೇಶದಲ್ಲಿ ಸಂಭವಿಸುವ ಸಾವುಗಳಿಗೆ ಪಾರ್ಶ್ವವಾಯು ಎರಡನೇ ಸಾಮಾನ್ಯ ಕಾರಣವಾಗಿದೆ. ಪ್ರತಿ ನಾಲ್ಕು ನಿಮಿಷಕ್ಕೆ ಒಬ್ಬ ವ್ಯಕ್ತಿ ಪಾರ್ಶ್ವವಾಯುವಿನಿಂದ ಮೃತಪಡುತ್ತಾನೆ ಎಂದು ನರರೋಗ ತಜ್ಞ ಎಂ.ವಿ. ಪದ್ಮ ಶ್ರೀವಾತ್ಸವ ಅವರು ತಿಳಿಸಿದ್ದಾರೆ.
ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಶ್ರೀ ಗಂಗಾ ರಾಮ್ ಆಸ್ಪತ್ರೆಯಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅವರು ಪಾರ್ಶ್ವವಾಯು ಶುಶ್ರೂಷೆ ಮತ್ತು ಭಾರತದ ಸಾಧಾರಣ ಸಂಪನ್ಮೂಲ ಪರಿಸ್ಥಿತಿಯಲ್ಲಿ ಪಾರ್ಶ್ವವಾಯು ತಡೆ ವಿಧಾನಗಳು' ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು. ಜಾಗತಿಕ ಮಟ್ಟದಲ್ಲಿ ರೋಗಗಳ ಹೊರೆ (ಜಿಬಿಡಿ) ಪ್ರಕಾರ ಭಾರತದಲ್ಲಿ ಗರಿಷ್ಠಮಟ್ಟದಲ್ಲಿ ಅಂದರೆ, ಶೇ 68.6ರಷ್ಟು ಪಾರ್ಶ್ವವಾಯು ಪ್ರಕರಣಗಳು ಸಂಭವಿಸುತ್ತವೆ. ಶೇ 70.9ರಷ್ಟು ಪಾರ್ಶ್ವವಾಯು ಸಂಬಂಧಿ ಸಾವುಗಳು ಸಂಭವಿಸುತ್ತವೆ. ಶೇ 77.7ರಷ್ಟು ಪ್ರಕರಣಗಳಲ್ಲಿ ಜನರು 'ವಿಕಲತೆ ಜೊತೆಗೆ ಹೊಂದಿಕೊಂಡ ಜೀವನ' (ಡಿಎಎಲ್‌ವೈ) ನಿರ್ವಹಿಸುತ್ತಾರೆ ಎಂದರು.
ದೇಶದಲ್ಲಿ ಸುಮಾರು 1.85 ಲಕ್ಷ ಪಾರ್ಶ್ವವಾಯು ಪ್ರಕರಣಗಳು ಸಂಭವಿಸುತ್ತವೆ. 40 ಸೆಕೆಂಡುಗಳಿಗೆ ಒಬ್ಬರು ಪಾರ್ಶ್ವವಾಯುವಿಗೆ ಒಳಗಾಗುತ್ತಾರೆ. ಇದು ದೇಶದ ಮಟ್ಟಿಗೆ ಎಚ್ಚರಿಕೆ ಗಂಟೆ ಎಂದರು.
ದೇಶದಲ್ಲಿ ಯುವಜನ ಮತ್ತು ಮಧ್ಯ ವಯಸ್ಕರು ಕೂಡಾ ಹೆಚ್ಚಿನ ಸಂಖ್ಯೆಯಲ್ಲಿ ಪಾರ್ಶ್ವವಾಯುವಿಗೆ ತುತ್ತಾಗುತ್ತಿದ್ದಾರೆ. ಈ ಎಲ್ಲಾ ಎಚ್ಚರಿಕೆಯ ಹೊರತಾಗಿಯೂ ಭಾರತದಲ್ಲಿ ಪಾರ್ಶ್ವವಾಯು ಚಿಕಿತ್ಸೆಗೆ ಸಮರ್ಪಕ ಮೂಲಭೂತ ಸೌಕರ್ಯವಿಲ್ಲ. ಪಾರ್ಶ್ವವಾಯು ರೋಗಿಗಳಿಗೆ ಕೂಡಲೇ ಮತ್ತು ಸಮರ್ಥವಾಗಿ ಚಿಕಿತ್ಸೆ ನೀಡಲು ವ್ಯವಸ್ಥೆ ಸಜ್ಜುಗೊಳಿಸಬೇಕು ಎಂದು ಆಗ್ರಹಿಸಿದರು.