ಕಾಸರಗೋಡು: ಬದಿಯಡ್ಕ ಪೆÇಲೀಸ್ ಠಾಣೆ ವ್ಯಾಪ್ತಿಯ ಮುಂಡಿತ್ತಡ್ಕ ಸನಿಹದ ಪಳ್ಳಂನಲ್ಲಿ ಜನವಾಸವಿಲ್ಲದ ಮನೆಯೊಳಗಿಂದ ಒಂದು ಸಾವಿರ ಮುಖಬೆಲೆಯ ಒಂದು ಕೋಟಿಗೂ ಹೆಚ್ಚಿನ ಮೊತ್ತದ ನಿಷೇಧಿತ ನೋಟುಗಳನ್ನು ಬದಿಯಡ್ಕ ಠಾಣೆ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಬದಿಯಡ್ಕ ಪೊಲೀಸ್ ಠಾಣೆ ಎಸ್.ಐ ಕೆ.ಪಿ ವಿನೋದ್‍ಕುಮಾರ್ ನೇತೃತ್ವದ ಪೊಲೀಸರ ತಂಡ ಗುರುವಾರ ರಾತ್ರಿ ಕಾರ್ಯಾಚರಣೆ ನಡೆಸಿ ನಿಷೇಧಿತ ನೋಟು ವಶಪಡಿಸಿಕೊಂಡಿದೆ. ಸಾವಿರ ರೂ. ಮುಖಬೆಲೆಯ ನೋಟುಗಳನ್ನು ಕಟ್ಟಗಳನ್ನಾಗಿಸಿ ಐದು ಗೋಣಿಗಳಲ್ಲಿ ತುಂಬಿಡಲಾಗಿತ್ತು. ವಶಪಡಿಸಿಕೊಂಡಿರುವ ನೋಟುಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಚೆರ್ಕಳ ನಿವಾಸಿ ಶಾಫಿ ಎಂಬವರ ಮಾಲಿಕತ್ವದ ಮನೆ ಇದಾಗಿದ್ದು, ಈ ಹಿಂದೆ ಕೆಲವರಿಗೆ ಬಾಡಿಗೆಗೆ ನೀಡಿದ್ದರೆನ್ನಲಾಗಿದೆ. ಬೀಗ ಹಾಕಿರುವ ಮನೆಯಲ್ಲಿ ರಹಸ್ಯ ಗ್ಯಾಂಗ್ ಪ್ಲಾನ್ ಸಿದ್ಧಪಡಿಸುತ್ತಿರುವುದೂ ಪೊಲೀಸರ ಗಮನಕ್ಕೆ ಬಂದಿತ್ತು. ಈ ಮಧ್ಯೆ ಮನೆಗೆ ರಾತ್ರಿ ವೇಳೆ ವಾಹನಗಳು ಆಗಮಿಸುವುದು, ವಾಹನದಲ್ಲಿದ್ದ ಜನರು ಮನೆಯೊಳಗೆ ತೆರಳಿದ ತಕ್ಷಣ ಬಾಗಿಲು ಮುಚ್ಚಿ ಕೆಲ ಸಮಯದ ನಂತರ ವಾಪಸಾಗುವುದನ್ನು ಸ್ಥಳೀಯರು ದೂರದಿಂದ ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ನಿಷೇಧಿತ ನೋಟುಗಳನ್ನು ಸಂಗ್ರಹಿಸಿಟ್ಟುಕೊಂಡಿರುವ ಹಿಂದೆ ನಿಗೂಢತೆಯಿದ್ದು, ಇದನ್ನು ನೇಪಾಳ ಸೇರಿದಂತೆ ವಿವಿಧೆಡೆ ರವಾನಿಸಲಾಗುತ್ತಿದೆ ಎನ್ನಲಾಗಿದೆ. ಈ ನೋಟುಗಳ ಪೂರೈಕೆಗೆ ನೇಪಾಳಿ ನಿವಾಸಿಗಳಿಬ್ಬರು ಏಜೆಂಟ್ ಆಗಿ ಇವರಿಗೆ ಸಹಕರಿಸುತ್ತಿದ್ದಾರೆಂಬ ಮಾಹಿತಿ ಲಭಿಸಿದ್ದು, ಈ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಜನವಾಸವಿಲ್ಲದ ಮನೆಯೊಳಗೆ ದಾಸ್ತಾನಿರಿಸಿದ್ದ ಕೋಟಿಗೂ ಹೆಚ್ಚು ಮೌಲ್ಯದ ನಿಷೇಧಿತ ನೋಟುಗಳು ವಶಕ್ಕೆ *ಬದಿಯಡ್ಕ ಠಾಣೆ ಪೊಲೀಸರ ಕಾರ್ಯಾಚರಣೆ
0
ಮಾರ್ಚ್ 31, 2023