ತಿರುವನಂತಪುರಂ: ಯಾವುದೇ ಸೂಕ್ತ ಕಾರಣವಿಲ್ಲದೆ ನಾಗರಿಕರ ಖಾಸಗಿ ಜೀವನಗಳನ್ನು ಅತಿಕ್ರಮಿಸಲು ಯಾವುದೇ ಮಾಧ್ಯಮ ವ್ಯಕ್ತಿ ಅಥವಾ ಸರ್ಕಾರಿ ಏಜನ್ಸಿಗೆ ಹಕ್ಕಿಲ್ಲ ಎಂದು ಕೇರಳ ಹೈಕೋರ್ಟ್ (Kerala High Court) ಹೇಳಿದೆ ಎಂದು barandbench.com ವರದಿ ಮಾಡಿದೆ.
ಸತ್ಯ ಮತ್ತು ನ್ಯಾಯಕ್ಕಾಗಿ ಹೋರಾಟ ಎಂಬ ಹೆಸರಿನಲ್ಲಿ ತಮ್ಮ ವೈಯಕ್ತಿಕ ದ್ವೇಷವನ್ನು ಮರೆಮಾಡಿ ವ್ಯಕ್ತಿಗಳ ಖಾಸಗಿತನವನ್ನು ಅತಿಕ್ರಮಿಸುವ ಕೆಲ ಮಾಧ್ಯಮ ವ್ಯಕ್ತಿಗಳ ಕೃತ್ಯಗಳನ್ನು ಇತ್ತೀಚೆಗೆ ಜಸ್ಟಿಸ್ ವಿ ಜಿ ಅರುಣ್ ಪ್ರಕರಣವೊಂದರ ತೀರ್ಪು ನೀಡುವ ವೇಳೆ ಟೀಕಿಸಿದ್ದಾರೆ.
"ಪ್ರತಿಯೊಬ್ಬ ವ್ಯಕ್ತಿಯು ಖಾಸಗಿಯಾಗಿ ಕಾರ್ಯಗಳನ್ನು ನಿರ್ವಹಿಸುವ ಹಕ್ಕು ಹೊಂದಿದ್ದಾರೆ. ಅದರ ಮೇಲೆ ಯಾರೂ ಕಣ್ಣಿಡುವ ಹಾಗಿಲ್ಲ, ಜನರ ಖಾಸಗಿ ಜೀವನಗಳಲ್ಲಿ ಇಣುಕಿ ನೋಡುವ ಹಕ್ಕು ಮಾಧ್ಯಮ ಅಥವಾ ಸರ್ಕಾರಿ ಏಜನ್ಸಿಗಳಿಗಿಲ್ಲ," ಎಂದು ನ್ಯಾಯಾಲಯ ಹೇಳಿದೆ.
ಆನ್‌ಲೈನ್ ಮಾಧ್ಯಮದ ಒಂದು ವರ್ಗವು ಸುದ್ದಿಗಿಂತ ಹೆಚ್ಚಾಗಿ ಆಶ್ಲೀಲತೆಯನ್ನು ಪ್ರಸಾರ ಮಾಡುತ್ತಿದೆ ಹಾಗೂ ಸಾರ್ವಜನಿಕರ ಒಂದು ವರ್ಗ ಅದನ್ನು ಆನಂದಿಸುತ್ತಿದೆ ಎಂದು ಹೇಳಿದ ನ್ಯಾಯಾಧೀಶರು, ಆನ್‌ಲೈನ್ ಸುದ್ದಿ ತಾಣಗಳು ಇಂತಹ ವಿಷಯಗಳನ್ನು ಪ್ರಸಾರ ಮಾಡುವ ಮುನ್ನ ಎಚ್ಚರಿಕೆ ವಹಿಸಬೇಕು ಎಂದಿದ್ದಾರೆ.
"ವ್ಯಕ್ತಿಯೊಬ್ಬನ ಖಾಸಗಿ ಜೀವನದ ಕುರಿತಾದ ವಿಚಾರವನ್ನು ಸಾರ್ವಜನಿಕರ ವೀಕ್ಷಣೆಗೆ ಪ್ರಸಾರ ಮಾಡುವುದು ಒಂದು ಅರಪಾಧ ಕೃತ್ಯವಾಗಿದೆ ಆದರೆ ಇಂತಹ ಕೃತ್ಯಗಳನ್ನು ತಡೆಯಲು ಈ ಸಮಯ ಯಾವುದೇ ಕಾನೂನಿನಲ್ಲ, ಅಂತಹ ಕಾನೂನು ಜಾರಿಯಾಗುವ ತನಕ ಸುದ್ದಿ ವಾಹಿನಿಗಳು ತಾವಾಗಿಯೇ ಸುದ್ದಿಗಳನ್ನು ಪರಾಮರ್ಶಿಸಿ ತಮ್ಮ ಕೃತ್ಯ ಯಾವುದೇ ರೀತಿಯಲ್ಲಿ ಪ್ರಜಾಪ್ರಭುತ್ವದ ನಾಲ್ಕನೇ ಶಕ್ತಿಶಾಲಿ ಆಧಾರಸ್ಥಂಭವು ಅವನತಿ ಹೊಂದದಂತೆ ಎಚ್ಚರ ವಹಿಸಬೇಕು," ಎಂದು ನ್ಯಾಯಾಧೀಶರು ಹೇಳಿದರು.
ತಮಗೆ ನಿರೀಕ್ಷಣಾ ಜಾಮೀನು ನಿರಾಕರಿಸಿದ ಎರ್ಣಾಕುಳಂ ಸೆಷನ್ಸ್ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ 'ಭಾರತ್ ಲೈವ್' ಎಂಬ ಸುದ್ದಿ ವಾಹಿನಿಯ ಇಬ್ಬರು ಸಲ್ಲಿಸಿದ ಅರ್ಜಿಯ ವಿಚಾರಣೆ ವೇಳೆ ಕೋರ್ಟ್ ಮೇಲಿನಂತೆ ಅಭಿಪ್ರಾಯ ವ್ಯಕ್ತಪಡಿಸಿದೆ.
ಈ ಪ್ರಕರಣದ ಎರಡನೇ ಪ್ರತಿವಾದಿಯ ಕುರಿತು ಆಕ್ಷೇಪಾರ್ಹ ಸುದ್ದಿಗಳು ಹಾಗೂ ಆಕೆಯ ಖಾಸಗಿ ವೀಡಿಯೋಗಳನ್ನು ಪ್ರಕಟಿಸಿದ ಆರೋಪ ಈ ಇಬ್ಬರ ಮೇಲಿದೆ.
ಅವರಿಗೆ ನಿರೀಕ್ಷಣಾ ಜಾಮೀನು ನೀಡಲು ನಿರಾಕರಿಸಿದ ಕೇರಳ ಹೈಕೋರ್ಟ್ ಅವರ ಅರ್ಜಿಗಳನ್ನು ವಜಾಗೊಳಿಸಿದೆ.