ನಾಸಿಕ್: ಈರುಳ್ಳಿ ಬೆಲೆ ಕುಸಿತದಿಂದ ಕಂಗೆಟ್ಟಿರುವ ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ರೈತರೊಬ್ಬರು ಸರ್ಕಾರದ ನೀತಿಗಳನ್ನು ವಿರೋಧಿಸಿ ಈರುಳ್ಳಿ ಬೆಳೆಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಾಸಿಕ್‌ನ ಏಷ್ಯಾದ ಅತಿದೊಡ್ಡ ಸಗಟು ಈರುಳ್ಳಿ ಮಾರುಕಟ್ಟೆಯಾದ ಲಾಸಲ್‌ಗಾಂವ್‌ನಲ್ಲಿರುವ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ(ಎಪಿಎಂಸಿ)ಯಲ್ಲಿ ಈರುಳ್ಳಿ ಬೆಲೆ ತೀವ್ರವಾಗಿ ಕುಸಿದಿದ್ದು, ಬೆಳೆಗಾರರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಈರುಳ್ಳಿ ಬೆಲೆ ಪ್ರತಿ ಕಿಲೋಗೆ 2 ರಿಂದ 4 ರೂ.ಗೆ ಇಳಿದಿದ್ದು, ಇದರಿಂದ ಸಿಟ್ಟಿಗೆದ್ದ ಬೆಳೆಗಾರರು ಕಳೆದ ವಾರ ಎಪಿಎಂಸಿಯಲ್ಲಿ ಈರುಳ್ಳಿ ಹರಾಜನ್ನೇ ಒಂದು ದಿನ ನಿಲ್ಲಿಸಿದ್ದರು.
ಯೋಳ ತಾಲೂಕಿನ ಮಾಥುಲ್ಥಾನ್ ಗ್ರಾಮದ ರೈತ ಕೃಷ್ಣ ಡೋಂಗ್ರೆ ಅವರು ಒಂದೂವರೆ ಎಕರೆ ಜಮೀನಿನಲ್ಲಿ ಬೆಳೆದಿದ್ದ ಈರುಳ್ಳಿ ಬೆಳೆಯನ್ನು ಸುಟ್ಟು ಹಾಕಿದ್ದು, ಸರ್ಕಾರದ ವಿರುದ್ಧ ಪ್ರತಿಭಟನೆಗೆ ಕರೆ ನೀಡಿರುವ ಆಮಂತ್ರಣ ಪತ್ರಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
''ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರನ್ನು ಅವರ ಹಣೆಬರಹಕ್ಕೆ ಬಿಟ್ಟಿವೆ. ರೈತ ಬದುಕಿದ್ದಾನೋ, ಸಾಯುತ್ತಾನೋ ಎಂಬುದರ ಬಗ್ಗೆ ಸರ್ಕಾರಗಳು ತಲೆ ಕೆಡಿಸಿಕೊಳ್ಳುತ್ತಿಲ್ಲ. ಇದು ಮಹಾರಾಷ್ಟ್ರಕ್ಕೆ ಮಾತ್ರವಲ್ಲ, ರಾಷ್ಟ್ರಕ್ಕೆ ಕರಾಳ ದಿನವಾಗಿದೆ. ರೈತರು ಈರುಳ್ಳಿಯ ದೀಪವನ್ನು ಬೆಳಗಿಸುವ ಮೂಲಕ ಪ್ರತಿಭಟಿಸಬೇಕು” ಎಂದು ರೈತ ಕೃಷ್ಣ ಡೋಂಗ್ರೆ ಕರೆ ನೀಡಿದ್ದಾರೆ.