ನವದೆಹಲಿ(PTI): ದೈನಂದಿನ ಕೋವಿಡ್-19 ಪಾಸಿಟಿವ್ ಪ್ರಕರಣಗಳ ಸಂಖ್ಯೆ ಕ್ರಮೇಣ ಏರಿಕೆಯಾಗುತ್ತಿರುವ ಮಧ್ಯೆ, ಕೋವಿಡ್ ನಿಂದ ಆಸ್ಪತ್ರೆಗಳಿಗೆ ದಾಖಲಾಗುತ್ತಿರುವವರ ಸಂಖ್ಯೆ ಅಥವಾ ಸಾವಿನ ಪ್ರಮಾಣದಲ್ಲಿ ಯಾವುದೇ ಹೆಚ್ಚಳವಾಗಿಲ್ಲ ಎಂದು ಕೇಂದ್ರ ಸರ್ಕಾರ ಗುರುವಾರ ತಿಳಿಸಿದೆ.
ದೇಶದಲ್ಲಿ ಒಮಿಕ್ರಾನ್‌ನ ಎಕ್ಸ್‌ಬಿಬಿ.1.16 ಸಬ್‌ವೇರಿಯಂಟ್ ಪ್ರಬಲವಾದ ವೈರಸ್ ಆಗಿರಬಹುದು. ಆದರೆ ಆಸ್ಪತ್ರೆಗೆ ದಾಖಲಾಗುವ ಪ್ರಮಾಣದಲ್ಲಿ ಅಥವಾ ಸಾವಿನ ಪ್ರಮಾಣದಲ್ಲಿ ಯಾವುದೇ ಹೆಚ್ಚಳ ಕಂಡುಬಂದಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ಸಂಪೂರ್ಣ ಜೀನೋಮ್ ಅನುಕ್ರಮದ ನಂತರ ಕಳೆದ ಮೂರು ತಿಂಗಳಲ್ಲಿ, ಜನವರಿ, ಫೆಬ್ರವರಿ ಮತ್ತು ಮಾರ್ಚ್‌ನಲ್ಲಿ 344 ಮಾದರಿಗಳಲ್ಲಿ XBB.1.16 ದೃಢಪಟ್ಟಿದೆ ಎಂದು ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಅವರು ಹೇಳಿದ್ದಾರೆ.
ಎಕ್ಸ್‌ಬಿಬಿ.1.16 ಸಬ್‌ವೇರಿಯಂಟ್ ಮಹಾರಾಷ್ಟ್ರ (105), ತೆಲಂಗಾಣ (93), ಕರ್ನಾಟಕ (57), ಗುಜರಾತ್ (54) ಮತ್ತು ದೆಹಲಿ(19)ಯಲ್ಲಿ ವರದಿಯಾಗಿವೆ ಎಂದು ಅವರು ತಿಳಿಸಿದ್ದಾರೆ.
"ಓಮಿಕ್ರಾನ್ ಮತ್ತು ಅದರ ಉಪ-ವಂಶಗಳು ಪ್ರಧಾನ ರೂಪಾಂತರವಾಗಿ ಮುಂದುವರೆದಿದೆ. ಆಸ್ಪತ್ರೆಗೆ ದಾಖಲು /ಅಥವಾ ಮರಣ ಪ್ರಮಾಣ ಹೆಚ್ಚಳದ ಬಗ್ಗೆ ಯಾವುದೇ ಪುರಾವೆಗಳು ವರದಿಯಾಗಿಲ್ಲ" ಎಂದು ಭೂಷಣ್ ಅವರು ಹೇಳಿದ್ದಾರೆ.
ಆರೋಗ್ಯ ಸಚಿವಾಲಯದ ಪ್ರಕಾರ, ದೇಶದಲ್ಲಿ ಕಳೆದ ವಾರ ದೈನಂದಿನ ಕೊರೋನಾ ವೈರಸ್ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದ್ದು, ಮಹಾರಾಷ್ಟ್ರ, ಗುಜರಾತ್, ಕೇರಳ ಮತ್ತು ಕರ್ನಾಟಕದಲ್ಲಿ ಹೆಚ್ಚು ಪ್ರಕರಣಗಳು ವರದಿಯಾಗಿದೆ.