ಗುವಾಹಟಿ: ಇಲ್ಲಿನ ರೈಲ್ವೇ ನಿಲ್ದಾಣದಲ್ಲಿ ಸಂಪೂರ್ಣ ತೃತೀಯ ಲಿಂಗಿ ಸಮುದಾಯದವರೇ ನಿರ್ವಹಿಸುವ ಟೀ ಸ್ಟಾಲ್ ನಿರ್ಮಿಸುವ ಮೂಲಕ ಭಾರತೀಯ ರೈಲ್ವೇ ಮಹತ್ವದ ನಿರ್ಧಾರ ಕೈಗೊಂಡಿದೆ.
ತೃತೀಯ ಲಿಂಗಿಗಳ ಸಮುದಾಯವನ್ನು ಸಬಲೀಕರಣಗೊಳಿಸಲು 'ಟ್ರಾನ್ಸ್ ಟೀ ಸ್ಟಾಲ್' ಎಂಬ ಯೋಜನೆಯನ್ನು ಈಶಾನ್ಯ ಗಡಿನಾಡು ರೈಲ್ವೆ (ಎನ್‌ಇಎಫ್‌ಆರ್) ಆರಂಭಿಸಿದೆ ಎಂದು ಅದರ ವಕ್ತಾರ ಸವ್ಯಸಾಚಿ ಹೇಳಿದ್ದಾರೆ.
ಅಸ್ಸಾಂನ ಎಲ್ಲಾ ತೃತೀಯ ಲಿಂಗಿ ಸಂಸ್ಥೆಗಳ ಸಹಕಾರದೊಂದಿಗೆ ಈ ಮಹತ್ವದ ಯೋಜನೆಯನ್ನು ಎನ್‌ಇಎಫ್‌ಆರ್ ಕೈಗೊಂಡಿದೆ ಎಂದು ಅವರು ಹೇಳಿದರು.
ಗುವಾಹಟಿ ನಿಲ್ದಾಣದ ಪ್ಲಾಟ್‌ಫಾರ್ಮ್ ನಂಬರ್ ಒಂದರಲ್ಲಿ 'ಟ್ರಾನ್ಸ್ ಟೀ ಸ್ಟಾಲ್' ಅನ್ನು ಈಶಾನ್ಯ ಗಡಿನಾಡು ರೈಲ್ವೇ ಜನರಲ್ ಮ್ಯಾನೇಜರ್ ಅನ್ಶುಲ್ ಗುಪ್ತಾ ಶುಕ್ರವಾರ ಉದ್ಘಾಟಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಗುಪ್ತಾ, 'ದೇಶದ ಸರ್ಕಾರಿ ಸಂಸ್ಥೆಯೊಂದು ಕೈಗೊಂಡ ಈ ರೀತಿಯ ಮೊದಲ ಮಹತ್ವದ ನಿರ್ಧಾರ ಇದಾಗಿದೆ' ಎಂದು ತಿಳಿಸಿದರು.
ಈ ಪ್ರದೇಶದ ಇತರ ರೈಲ್ವೇ ನಿಲ್ದಾಣಗಳಲ್ಲಿ ಇದೇ ರೀತಿಯ ಹೆಚ್ಚಿನ ಟೀ ಸ್ಟಾಲ್‌ಗಳನ್ನು ತೆರೆಯಲು ಎನ್‌ಎಫ್ ರೈಲ್ವೇ ಯೋಜನೆ ರೂಪಿಸುತ್ತದೆ ಎಂದು ಹೇಳಿದರು.
ಅಸ್ಸಾಂನ ತೃತೀಯ ಲಿಂಗಿಗಳ ಕಲ್ಯಾಣ ಮಂಡಳಿಯ ಉಪಾಧ್ಯಕ್ಷೆ ಸ್ವಾತಿ ಬಿಧನ್ ಬರುವಾ ಮಾತನಾಡಿ, ಮುಂಬರುವ ದಿನಗಳಲ್ಲಿ ವಿವಿಧ ಸರ್ಕಾರಿ ಯೋಜನೆಗಳ ಅಡಿಯಲ್ಲಿ ತೃತೀಯ ಲಿಂಗಿಗಳಿಗೆ ಆಶ್ರಯ ದೊರೆಯುವಂತಾಗಲಿ ಎಂಬ ಆಶಾಭಾವನೆ ವ್ಯಕ್ತಪಡಿಸಿದರು.
ಸಮಾಜದಲ್ಲಿ ಕಡೆಗಣಿಸಲ್ಪಟ್ಟ ಜನರಿಗೆ ಜೀವನೋಪಾಯ ಮತ್ತು ಉದ್ಯಮದ ನೆರವು ನೀಡುವ ದೃಷ್ಟಿಯಿಂದ ಸಮಗ್ರ ಯೋಜನೆಯನ್ನು ಅಸ್ಸಾಂ ಸರ್ಕಾರ ಕಳೆದ ವರ್ಷ ಪ್ರಾರಂಭಿಸಿತ್ತು. ಇದರಲ್ಲಿ ತೃತೀಯ ಲಿಂಗಿಗಳಿಗೆ ಪುನರ್ವಸತಿ ಮತ್ತು ಕಲ್ಯಾಣ ಎಂಬ ಉಪಯೋಜನೆಯೂ ಇದೆ.