ನವದೆಹಲಿ (PTI): ಪಶ್ಚಿಮ ಬಂಗಾಳದ ಪಂಚಾಯತ್ ಚುನಾವಣಾ ಪ್ರಕ್ರಿಯೆಯಲ್ಲಿ ಮಧ್ಯಪ್ರವೇಶಿಸಲು ನಿರಾಕರಿಸಿ ಕಲ್ಕತ್ತಾ ಹೈಕೋರ್ಟ್ ಮಂಗಳವಾರ ನೀಡಿದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿಯ ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್ ಬುಧವಾರ ನಿರಾಕರಿಸಿದೆ.
ಈ ವಿಚಾರಣೆಯನ್ನು ತುರ್ತಾಗಿ ನಡೆಸದಿದ್ದರೆ, ಚುನಾವಣಾ ಅಧಿಸೂಚನೆ ಹೊರಬೀಳುವ ಸಾಧ್ಯತೆ ಇದೆ ಎಂದು ಹಿರಿಯ ವಕೀಲ ಪಿ.ಎಸ್.ಪಟ್ವಾಲಿಯಾ ಅವರು ಸಲ್ಲಿಸಿದ್ದ ಅರ್ಜಿಯನ್ನು ಗಮನಿಸಿದ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್, ನ್ಯಾಯಮೂರ್ತಿಗಳಾದ ಪಿ.ಎಸ್.ನರಸಿಂಹ ಮತ್ತು ಜೆ.ಬಿ.ಪಾರ್ದಿವಾಲ ಅವರನ್ನೊಳಗೊಂಡ ಪೀಠವು, 'ಈ ವಿಷಯವು ದಿನದ ವಿಚಾರಣಾ ಪಟ್ಟಿಯಲ್ಲಿಲ್ಲ. ನಂತರ ಇದನ್ನು ಪಟ್ಟಿಗೆ ಸೇರಿಸಬಹುದು. ಎಲ್ಲ ವಕೀಲರಿಗೂ ಒಂದೇ ನ್ಯಾಯ. ವಿಚಾರಣಾ ಪಟ್ಟಿಯಲ್ಲಿಲ್ಲದ ವಿಷಯವನ್ನು ಈಗ ವಿಚಾರಣೆಗೆ ತೆಗೆದುಕೊಳ್ಳುವುದು ಬೇಡ' ಎಂದು ಹೇಳಿತು.
ಹಬ್ಬ ಹಾಗೂ ವಾರದ ರಜೆಗಳ ನಂತರ ಏ.5ರಂದು ಸುಪ್ರೀಂ ಕೋರ್ಟ್ ಮತ್ತೆ ಕಾರ್ಯಾರಂಭ ಮಾಡಲಿದೆ.
ಮೇ ತಿಂಗಳೊಳಗೆ ನಡೆಯಲಿರುವ ಪಶ್ಚಿಮ ಬಂಗಾಳ ಪಂಚಾಯತ್ ಚುನಾವಣಾ ಪ್ರಕ್ರಿಯೆಯಲ್ಲಿ ಮಧ್ಯಪ್ರವೇಶಿಸಲು ಕಲ್ಕತ್ತಾ ಹೈಕೋರ್ಟ್ ಮಂಗಳವಾರ ನಿರಾಕರಿಸಿತು. ಆದರೆ, ಕ್ಷೇತ್ರಗಳ ಮೀಸಲಾತಿ ನಿಗದಿಗೆ ಅನುಸರಿಸಿದ ಮಾನದಂಡಗಳ ಕುರಿತು ಅರ್ಜಿದಾರ ಸುವೇಂದು ಅಧಿಕಾರಿ ಅವರ ವಾದದಲ್ಲಿ ಹುರುಳಿದೆ ಎಂದು ಹೇಳಿತ್ತು.