ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿರುದ್ಧ ನ್ಯಾಯಾಲಯದಲ್ಲಿ ಮಾನನಷ್ಟ ಕೇಸ್ ಹಾಕುತ್ತೇನೆ ಎಂದು ಕಾಂಗ್ರೆಸ್ ನಾಯಕಿ, ಮಾಜಿ ಸಚಿವೆ ರೇಣುಕಾ ಚೌಧರಿ ಹೇಳಿದ್ದಾರೆ.
ನನ್ನನ್ನು ಶೂರ್ಪನಖಿ ಎಂದು ಉಲ್ಲೇಖಿಸಿದ್ದಾರೆ. ಹೀಗಾಗಿ ನಾನು ಮೋದಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ. ನ್ಯಾಯಾಲಯಗಳು ಎಷ್ಟು ವೇಗವಾಗಿ ಕಾರ್ಯನಿರ್ವಹಿಸುತ್ತವೆ ಎಂಬುದನ್ನು ನೋಡೋಣ ಎಂದು ರೇಣುಕಾ ಚೌಧರಿ ಟ್ವೀಟ್ ಮಾಡಿ ತಿಳಿಸಿದ್ದಾರೆ.
ಮೋದಿಹೇಳಿದ್ದೇನು?: 2018ರಲ್ಲಿ ರಾಜ್ಯಸಭಾ ಕಲಾಪದ ಹಳೆ ವಿಡಿಯೋದಲ್ಲಿ ಆಧಾರ್ ಕಾರ್ಡ್‌ಗೆ ಸಂಬಂಧಿಸಿದಂತೆ ಪ್ರಧಾನಿ ಮೋದಿ ಹೇಳಿಕೆಗೆ ಸಂಸದೆ ರೇಣುಕಾ ಚೌಧರಿ ಜೋರಾಗಿ ನಗುತ್ತಿರುತ್ತಾರೆ. ಈ ಸಂದರ್ಭದಲ್ಲಿ ಸಭಾಧ್ಯಕ್ಷ ವೆಂಕಯ್ಯ ನಾಯ್ಡು ಅವರು, 'ನಿಮ್ಮ ಸಮಸ್ಯೆ ಏನು? ನಿಮಗೇನಾದರೂ ಸಮಸ್ಯೆ ಆಗಿದ್ದರೆ ವೈದ್ಯರ ಬಳಿ ಹೋಗಿ, ದಯವಿಟ್ಟು ಸುಮ್ಮನೇ ಕುಳಿತುಕೊಳ್ಳಿ' ಎಂದು ತರಾಟೆಗೆ ತೆಗೆದುಕೊಳ್ಳುತ್ತಾರೆ.
ವೆಂಕಯ್ಯ ನಾಯ್ಡು ಸೂಚನೆಯನ್ನೂ ಧಿಕ್ಕರಿಸಿ ರೇಣುಕಾ ನಗುವುದನ್ನು ಮುಂದುವರಿಸುತ್ತಾರೆ. ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ, 'ಸಭಾಪತಿಜೀ ರೇಣುಕಾಜೀ ಅವರಿಗೆ ನೀವು ನಗಲು ಬಿಡಿ. ರಾಮಾಯಣ ಧಾರಾವಾಹಿಯ ನಂತರ ಈ ರೀತಿಯ ನಗುವನ್ನು ಕೇಳುವ ಸೌಭಾಗ್ಯ ಇಂದು ನಮಗೆ ಒದಗಿ ಬಂದಿದೆ' ಎಂದು ವ್ಯಂಗ್ಯವಾಡುತ್ತಾರೆ. ಮೋದಿ ರಾಮಾಯಣದ ಉದಾಹರಣೆ ನೀಡಿ ರೇಣುಕಾ ಚೌಧರಿ ಅವರ ಕಾಲೆಳೆಯುತ್ತಿದ್ದಂತೆ ಬಿಜೆಪಿ ಸಂಸದರು ಬೆಂಚನ್ನು ಕುಟ್ಟಿ ಜೋರಾಗಿ ಬಿದ್ದು ಬಿದ್ದು ನಗಲು ಶುರು ಮಾಡುತ್ತಾರೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ರಾಹುಲ್ ಗಾಂಧಿ ಜೈಲು ಶಿಕ್ಷೆಗೆ ಗುರಿಯಾದ ಬೆನ್ನಲ್ಲೇ ನಾನು ಮೋದಿ ವಿರುದ್ಧ ನ್ಯಾಯಾಲಯದಲ್ಲಿ ಮಾನನಷ್ಟ ಕೇಸ್ ಹಾಕುತ್ತೇನೆ ಎಂದು ಕಾಂಗ್ರೆಸ್ ನಾಯಕಿ, ಮಾಜಿ ಸಚಿವೆ ರೇಣುಕಾ ಚೌಧರಿ ಹೇಳಿದ್ದಾರೆ. ಮೋದಿ ಎಲ್ಲಿಯೂ ನೇರವಾಗಿ ರೇಣುಕಾ ಚೌಧರಿ ಅವರನ್ನು ʼಶೂರ್ಪನಖಿʼ ಎಂದು ಸಂಬೋಧನೆ ಮಾಡಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಈಗ ಕಾಂಗ್ರೆಸ್ ನಾಯಕರು ಈ ಹೇಳಿಕೆಯ ವಿರುದ್ಧ ಪ್ರಕರಣ ದಾಖಲಿಸಬೇಕೆಂದು ಆಗ್ರಹಿಸಿದ್ದರೆ ಕೆಲವರು ಈ ಹೇಳಿಕೆ ವಿರುದ್ಧ ನ್ಯಾಯಾಲಯದಲ್ಲಿ ಕೇಸ್ ದಾಖಲಿಸಲು ಬರುವುದಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮೋದಿ ಮಾತನಾಡಿದ್ದು 2018ರಲ್ಲಿ. ಅಲ್ಲಿಂದ ಇಲ್ಲಿಯವರೆಗೂ ಎಲ್ಲಿಯೂ ಕೇಸ್ ಹಾಕದ ನೀವು ಈಗ ದೂರು ನೀಡುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ರೇಣುಕಾ ಚೌಧರಿ ಅವರಿಗೆ ನೆಟ್ಟಿಗರು ಕ್ಲಾಸ್ ತೆಗೆದುಕೊಳ್ಳುತ್ತಿದ್ದಾರೆ.