ಕಾಸರಗೋಡು: ಉಕ್ಕಿನಡ್ಕದಲ್ಲಿ ನಿರ್ಮಾಣಹಂತದಲ್ಲಿರುವ ಕಾಸರಗೋಡು ವೈದ್ಯಕೀಯ ಕಾಲೇಜು ಆಸ್ಪತ್ರೆ ನಿರ್ಮಾಣ ಗುತ್ತಿಗೆದಾರರಿಗೆ ಹಣ ನೀಡದೆ ಕಾಮಗಾರಿ ಸ್ಥಗಿತಗೊಳಿಸುತ್ತಿರುವುದು ಪಿಣರಾಯಿವಿಜಯನ್ ನೇತೃತ್ವದ ಎಡರಂಗ ಸರ್ಕಾರ ಜಿಲ್ಲೆಯ ಜನರೊಂದಿಗೆ ತೋರುತ್ತಿರುವ ವಂಚನೆಯಾಗಿದೆ ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ಅಡ್ವ.ಕೆ.ಶ್ರೀಕಾಂತ್ ತಿಳಿಸಿದ್ದಾರೆ.
ಗುತ್ತಿಗೆದಾರರಿಗೆ ಹಣ ನೀಡದಿದ್ದರೆ ನಿರ್ಮಾಣ ನಿಲ್ಲಿಸಬೇಕಾದ ಪರಿಸ್ಥಿತಿ ಬರಲಿದೆ ಎಂದು ಗುತ್ತಿಗೆದಾರರು ಹೈಕೋರ್ಟ್‍ಗೆ ಮೊದಲೇ ತಿಳಿಸಿದ್ದರೂ, ನ್ಯಾಯಾಲಯದ ನಿರ್ದೇಶನದ ಹೊರತಾಗಿಯೂ, ಹಣ ಪಾವತಿ ಮಾಡದೆ ನಿರ್ಮಾಣ ಕಾರ್ಯ ಸ್ಥಗಿತಗೊಳಿಸಬೇಕಾಗಿ ಬಂದಿದೆ. ಸುಮಾರು ಆರು ಕೋಟಿ ರೂ. ಗುತ್ತಿಗೆದಾರgಗೆ ನೀಡಲು ಬಾಕಿ ಉಳಿಸಿಕೊಳ್ಳಲಾಗಿದೆ. ಇದರ ಸಂಪೂರ್ಣ ಹೊಣೆ ರಾಜ್ಯ ಸರಕಾರದ್ದಾಗಿದೆ. ಕಾಸರಗೋಡು ಜಿಲ್ಲೆಗೆ ಸಮರ್ಪಕ ವೈದ್ಯಕೀಯ ಸೌಲಭ್ಯಗಳಿಲ್ಲ ಎಂಬುದಾಗಿ ಸರ್ಕಾರ ಹೈಕೋರ್ಟ್‍ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದಿಗೆ ಪ್ರಮಾಣಪತ್ರವನ್ನೂ ಸಲ್ಲಿಸಿದೆ. ಸ್ಥಳೀಯಾಡಳಿತ ಸಂಸ್ಥೆಗಳಿಂದ ಸಿಪಿಎಂ ಅಧೀನದಲ್ಲಿರುವ ಸಹಕಾರಿ ಆಸ್ಪತ್ರೆಗಳಿಗೆ ಲಕ್ಷಾಂತರ ಹಣ ಮಂಜೂರು ಮಾಡಲು ಆದೇಶಿಸುವ ರಾಜ್ಯ ಸರ್ಕಾರ, ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆ ವಿಷಯದಲ್ಲಿ ಇಂತಹ ಆದೇಶ ಹೊರಡಿಸಿಲ್ಲ. ಕಾಸರಗೋಡಿನಲ್ಲಿ ಹತ್ತು ವರ್ಷದ ಹಿಂದೆ ಮಂಜೂರಾಗಿ ಲಭಿಸಿದ ಮೆಡಿಕಲ್ ಕಾಲೇಜು ಆಸ್ಪತ್ರೆಯನ್ನು, ಪಿಣರಾಯಿವಿಜಯನ್ ನೇತೃತ್ವದ ಸರ್ಕಾರ ಇಲ್ಲದಾಗಿಸಲು ಯತ್ನಿಸುತ್ತಿದೆ. ಇದರ ಹಿಂದೆ ಖಾಸಗಿ ಸಹಕಾರಿ ಆಸ್ಪತ್ರೆ ಲಾಬಿಯಿರುವುದಾಗಿ ಶ್ರೀಕಾಂತ್ ಆರೋಪಿಸಿದ್ದಾರೆ.