ಲಖನೌ: ಮಹತ್ವದ ಬೆಳವಣಿಗೆಯೊಂದರಲ್ಲಿ, ಎಸ್‌ಸಿ/ಎಸ್‌ಟಿ ನ್ಯಾಯಾಲಯವು 2020ರ ಹಾಥರಸ್ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಮೂವರು ಆರೋಪಿಗಳನ್ನು ಖುಲಾಸೆಗೊಳಿಸಿದೆ ಮತ್ತು ಒಬ್ಬ ವ್ಯಕ್ತಿಯನ್ನು ತಪ್ಪಿತಸ್ಥನೆಂದು ಘೋಷಿಸಿದೆ.
ಪ್ರಕರಣದ ನಾಲ್ವರು ಆರೋಪಿಗಳಾದ ಸಂದೀಪ್, ರವಿ, ಲವ್ ಕುಶ್ ಮತ್ತು ರಾಮು ಪೈಕಿ ಸಂದೀಪ್ ಮಾತ್ರ ಅಪರಾಧಿ ಎಂದು ನ್ಯಾಯಾಲಯ ಘೋಷಿಸಿದೆ.
2020ರ ಸೆಪ್ಟೆಂಬರ್ 14ರಂದು ಹಾಥರಸ್‌ನಲ್ಲಿ 19 ವರ್ಷದ ದಲಿತ ಯುವತಿ ಮೇಲೆ ನಾಲ್ವರು ಮೇಲ್ಜಾತಿ ಪುರುಷರು ಅತ್ಯಾಚಾರವೆಸಗಿದ್ದಾರೆ ಎಂದು ಆರೋಪಿಸಲಾಗಿದೆ. ಚಿಕಿತ್ಸೆಗೆ ಸ್ಪಂದಿಸದೆ ಸಂತ್ರಸ್ತೆ ಸೆಪ್ಟೆಂಬರ್ 29 ರಂದು ದೆಹಲಿಯ ಸಫ್ದರ್‌ಜಂಗ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು.
ಸಂತ್ರಸ್ತೆಯ ಅಂತ್ಯಕ್ರಿಯೆಯನ್ನು ಆಕೆಯ ಮನೆಯ ಸಮೀಪವೇ ರಾತ್ರಿ ಮಾಡಲಾಯಿತು. ಆಕೆಯ ಅಂತ್ಯಕ್ರಿಯೆಯನ್ನು ಆದಷ್ಟು ಬೇಗ ನಡೆಸುವಂತೆ ಸ್ಥಳೀಯ ಪೊಲೀಸರು ಒತ್ತಾಯಿಸಿದ್ದರು ಎಂದು ಆಕೆಯ ಕುಟುಂಬದವರು ಆರೋಪಿಸಿದ್ದಾರೆ.
ಆದಾಗ್ಯೂ, 'ಕುಟುಂಬದವರ ಇಚ್ಛೆಯಂತೆ' ಶವಸಂಸ್ಕಾರವನ್ನು ನಡೆಸಲಾಯಿತು ಎಂದು ಸ್ಥಳೀಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಆರೋಪಿಗಳ ಖುಲಾಸೆಯಿಂದ ಅಸಮಾಧಾನಗೊಂಡಿದ್ದು, ಕೆಳ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಶೀಘ್ರವೇ ಹೈಕೋರ್ಟ್ ಮೆಟ್ಟಿಲೇರುವುದಾಗಿ ಸಂತ್ರಸ್ತೆಯ ಕುಟುಂಬ ತಿಳಿಸಿದೆ.