ನವದೆಹಲಿ: ಸಲಿಂಗ ವಿವಾಹಕ್ಕೆ ಕಾನೂನಿನ ಮಾನ್ಯತೆ ಕೋರಿ ಸಲಿಂಗಿ ದಂಪತಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಅರ್ಜಿಯನ್ನು ಕೇಂದ್ರ ಸರ್ಕಾರ ವಿರೋಧಿಸಿದೆ.
ಈ ಸಂಬಂಧ ಸುಪ್ರೀಂ ಕೋರ್ಟ್‌ಗೆ ಅಫಿಡವಿಟ್ ಸಲ್ಲಿರುವ ಕೇಂದ್ರ ಸರ್ಕಾರ, ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ನೀಡುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದೆ.
ಸಲಿಂಗ ಸಂಬಂಧಗಳು ಮತ್ತು ಭಿನ್ನಲಿಂಗೀಯ ಸಂಬಂಧಗಳು ಸ್ಪಷ್ಟವಾಗಿ ವಿಭಿನ್ನ. ಅವುಗಳನ್ನು ಒಂದೇ ರೀತಿಯಲ್ಲಿ ಪರಿಗಣಿಸಲಾಗುವುದಿಲ್ಲ ಎಂದು ಕೇಂದ್ರವು ತನ್ನ ಅಫಿಡವಿಟ್‌ನಲ್ಲಿ ಪ್ರತಿಪಾದಿಸಿದೆ.
ಸದ್ಯ ಅಪರಾಧೀಕರಣಗೊಳ್ಳದ ಸಲಿಂಗಿಗಳ ಸಹ ಜೀವನವನ್ನು, ಹೆಂಡತಿ ಮತ್ತು ಮಕ್ಕಳನ್ನು ಒಳಗೊಂಡ ಭಾರತೀಯ ಕುಟುಂಬ ವ್ಯವಸ್ಥೆಯೊಂದಿಗೆ ಹೋಲಿಸಲಾಗುವುದಿಲ್ಲ ಎಂದು ಕೇಂದ್ರವು ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.
ಇತ್ತೀಚಿನ ಕೆಲ ತಿಂಗಳಲ್ಲಿ ಕನಿಷ್ಠ ನಾಲ್ಕು ಸಲಿಂಗಿ ಜೋಡಿಗಳು ಸಲಿಂಗ ವಿವಾಹಕ್ಕೆ ಮಾನ್ಯತೆ ನೀಡುವಂತೆ ನ್ಯಾಯಾಲಯವನ್ನು ಕೋರಿದ್ದಾರೆ. ಈ ಮೂಲಕ ಕೇಂದ್ರ ಸರ್ಕಾರದೊಂದಿಗೆ ಕಾನೂನು ಸಂಘರ್ಷಕ್ಕೆ ಇಳಿದಿದ್ದಾರೆ.