ಅಲಪ್ಪುಳ: ರಾಜಧಾನಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಮಹಿಳೆಯೊಬ್ಬಳಿಗೆ ಆಲ್ಕೋಹಾಲ್ ನೀಡಿ, ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಯೋಧನನ್ನು ಕೇರಳ ಪೊಲೀಸರು ಶನಿವಾರ (ಮಾ.18) ಬಂಧಿಸಿದ್ದಾರೆ.
ಬಂಧಿತ ಯೋಧನನ್ನು ಪ್ರತೀಶ್ ಕುಮಾರ್ ಎಂದು ಗುರುತಿಸಲಾಗಿದೆ.
ದೌರ್ಜನ್ಯಕ್ಕೆ ಒಳಗಾದ ತ್ರಿವೆಂಡ್ರಮ್ ಮೂಲದ ಮಹಿಳೆ ದೂರು ನೀಡಿದ ಬಳಿಕ ಆರೋಪಿಯನ್ನು ಬಂಧಿಸಲಾಗಿದೆ.
ಆರೋಪಿ ಪ್ರತೀಶ್ ಕಾಶ್ಮೀರದಲ್ಲಿ ನೆಲೆಸಿರುವ ಯೋಧ. ಈತ ತನ್ನ ಊರಿಗೆ ತೆರಳುತ್ತಿದ್ದ ವೇಳೆ ಉಡುಪಿಯಿಂದ ರಾಜಧಾನಿ ಎಕ್ಸ್‌ಪ್ರೆಸ್ ಹತ್ತಿದ ಮಹಿಳೆಯೊಂದಿಗೆ ಸ್ನೇಹ ಬೆಳೆಸಿದ. ನಂತರ ಅವಳ ಮನವೊಲಿಸಿ ಪಾನೀಯವನ್ನು ನೀಡಿದನು. ಯೋಧನೆಂಬ ನಂಬಿಕೆ ಇಟ್ಟು ಆಕೆ ಪಾನೀಯ ಕುಡಿದ ಬಳಿಕ ಮತ್ತಿನಲ್ಲಿದ್ದಳು. ಈ ವೇಳೆ ಆಕೆಯ ಮೇಲೆ ಪ್ರತೀಶ್ ದೌರ್ಜನ್ಯ ನಡೆಸಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ರೈಲು ತಿರುವನಂತಪುರಂ ತಲುಪಿದ ನಂತರ ಮಹಿಳೆ ತನ್ನ ಪತಿಗೆ ವಿವರಗಳನ್ನು ಬಹಿರಂಗಪಡಿಸಿದಳು. ಬಳಿಕ ಇಬ್ಬರು ಸೇರಿ ಪೊಲೀಸರಿಗೆ ದೂರು ನೀಡಿದ್ದಾರೆ. ಆ ಬಳಿಕ ಆರೋಪಿಯನ್ನು ಬಂಧಿಸಲಾಗಿದೆ. ಈ ಘಟನೆ ತಿಂಗಳ ಹಿಂದೆಯೇ ನಡೆದಿದ್ದು, ಅಂದಿನಿಂದ ಸಂತ್ರಸ್ತೆ ಖಿನ್ನತೆಗೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.