ನವದೆಹಲಿ: ಕೇಂದ್ರಾಡಳಿತ ಪ್ರದೇಶಗಳಾದ ಲಡಾಕ್ ಮತ್ತು ಜಮ್ಮು ಮತ್ತು ಕಾಶ್ಮೀರವನ್ನು ಸಂಪರ್ಕಿಸುವ ಝೋಜಿಲಾ ಪಾಸ್ ರಸ್ತೆಯನ್ನು ಪುನರಾರಂಭ ಮಾಡಲಾಗಿದೆ ಎಂದು ಗಡಿ ರಸ್ತೆ ಸಂಸ್ಥೆ (ಬಿಆರ್‌ಒ) ಗುರುವಾರ ತಿಳಿಸಿದೆ.
ಗ್ರೇಟರ್ ಹಿಮಾಲಯ ಶ್ರೇಣಿಯಲ್ಲಿ ನೆಲಮಟ್ಟದಿಂದ 11,650 ಅಡಿ ಎತ್ತರದಲ್ಲಿರುವ ಈ ರಸ್ತೆಯನ್ನು ಹಿಮಪಾತದ ಕಾರಣ ಜನವರಿ 7ರಂದು ಮುಚ್ಚಲಾಗಿತ್ತು.
'ಝೋಜಿಲಾ ಪಾಸ್‌ಅನ್ನು ಬಿಆರ್‌ಒ ಮಾ.16ರಂದು ಸಂಚಾರಕ್ಕೆ ಮುಕ್ತಗೊಳಿಸಿದೆ. ಕಳೆದ ವರ್ಷ 73 ದಿನಗಳ ಕಾಲ ಈ ರಸ್ತೆ ಮುಚ್ಚಲಾಗಿತ್ತು. ಈ ವರ್ಷ 68 ದಿನಗಳು ಈ ರಸ್ತೆಯನ್ನು ಮುಚ್ಚಲಾಗಿತ್ತು' ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.
'ಸತತ ಪರಿಶ್ರಮದ ಬಳಿಕ ಝೀಜಿಲಾ ಪಾಸ್ ಸಂಪರ್ಕವನ್ನು ಮಾರ್ಚ್ 11ರಂದು ಪುನಃಸ್ಥಾಪಿಸಲಾಯಿತು. ಬಳಿಕ ವಾಹನಗಳು ಸುರಕ್ಷಿತವಾಗಿ ಸಂಚರಿಸುವಂತೆ ಮಾಡುವ ನಿಟ್ಟಿನಲ್ಲಿ ರಸ್ತೆಯ ಗುಣಮಟ್ಟ ಸುಧಾರಿಸಲು ಪ್ರಯತ್ನಿಸಲಾಯಿತು. ಇದೇ ರೀತಿ, ಗುರೇಝ್ ವಲಯ ಮತ್ತು ಕಾಶ್ಮೀರ ಕಣಿವೆ ನಡುವೆ ಸಂಪರ್ಕ ಕಲ್ಪಿಸುವ ರಾಝ್ದಾನ್ ಪಾಸ್‌ಅನ್ನೂ ಕೂಡಾ 16ರಂದು ಪುನಾರಂಭಿಸಲಾಯಿತು' ಎಂದು ರಕ್ಷಣಾ ಸಚಿವಾಲಯ ಹೇಳಿದೆ.
ಅತಿ ಎತ್ತರದ ಪರ್ವತ ಶ್ರೇಣಿಗಳಲ್ಲಿಯ ಬಹುತೇಕ ರಸ್ತೆಗಳು ಚಳಿಗಾಲದಲ್ಲಿ ಹಿಮದಿಂದ ಮುಚ್ಚಿಹೋಗಿರುತ್ತವೆ.