ನವದೆಹಲಿ: ಕುಶಲಕರ್ಮಿಗಳು ಮತ್ತು ಸಣ್ಣ ಉದ್ಯಮಿಗಳಿಗೆ ನೆರವು ನೀಡಲು ಕಾಲಮಿತಿಯಲ್ಲಿ ಕೆಲಸ ಮಾಡಬೇಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಅಭಿಪ್ರಾಯಪಟ್ಟರು.
'ಪ್ರಧಾನಮಂತ್ರಿ ವಿಶ್ವಕರ್ಮ ಕೌಶಲ ಸಮ್ಮಾನ್' ಕುರಿತಂತೆ ಬಜೆಟ್ ನಂತರದ ವೆಬಿನಾರ್ ಉದ್ದೇಶಿಸಿ ಮಾತನಾಡಿದ ಅವರು, 'ಭಾರತದ ಅಭಿವೃದ್ಧಿಯ ಹಾದಿಯಲ್ಲಿ ಪ್ರತಿಯೊಂದು ಕ್ಷೇತ್ರದ ಸಬಲೀಕರಣವೂ ಮುಖ್ಯ.
ಇದಕ್ಕಾಗಿ ಕಾಲಮಿತಿಯಲ್ಲಿ ಕೆಲಸ ಮಾಡಬೇಕಿದೆ' ಎಂದು ಹೇಳಿದರು.
'ದೇಶದ ಶ್ರೀಮಂತ ಸಂಪ್ರದಾಯದ ಸಂರಕ್ಷಣೆ ಜೊತೆಗೆ ಸಾಂಪ್ರದಾಯಿಕ ಕುಶಲಕರ್ಮಿಗಳ ಅಭಿವೃದ್ಧಿಯೇ ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯ ಮುಖ್ಯ ಉದ್ದೇಶ. ಇವತ್ತಿನ ಕುಶಲಕರ್ಮಿಗಳು ನಾಳೆಯ ಉದ್ಯಮಿಗಳಾಗಬೇಕು. ಉದ್ಯಮ ಮಾದರಿಯಲ್ಲಿ ಈ ರೀತಿಯ ಸುಸ್ಥಿರತೆಯ ಅಗತ್ಯವಿದೆ' ಎಂದು ಅಭಿಪ್ರಾಯಪಟ್ಟರು.
'ಕುಶಲಕರ್ಮಿಗಳಲ್ಲಿ ಬಹುತೇಕರು ದಲಿತರು, ಆದಿವಾಸಿಗಳು, ಹಿಂದುಳಿದ ಸಮುದಾಯದವರು ಮತ್ತು ಮಹಿಳೆಯರು. ಅವರಿಗೆ ಯೋಜನೆಯ ಫಲ ತಲುಪಬೇಕೆಂದರೆ ಅದಕ್ಕೆ ಪ್ರಾಯೋಗಿಕ ತಂತ್ರಗಾರಿಕೆಯ ಅಗತ್ಯವಿದೆ' ಎಂದು ಹೇಳಿದರು.
'ಸುಲಭ ಸಾಲ, ತಾಂತ್ರಿಕ ಬೆಂಬಲ, ಡಿಜಿಟಲ್ ಸಬಲೀಕರಣ, ಮಾರುಕಟ್ಟೆ, ಕಚ್ಚಾ ವಸ್ತುಗಳನ್ನು ಪಡೆಯಲು ಪ್ರತಿಯೊಬ್ಬ ಕುಶಲಕರ್ಮಿಗೂ ಸರ್ಕಾರ ಸಮಗ್ರ ಸಾಂಸ್ಥಿಕ ನೆರವು ನೀಡುತ್ತದೆ' ಎಂದು ತಿಳಿಸಿದರು.