ಬದಿಯಡ್ಕ: ವಿವಿಧ ಇಲಾಖೆಗಳಲ್ಲಿರುವ ಸರ್ಕಾರೀ ಉದ್ಯೋಗಗಳನ್ನು ಪಡೆಯುವುದಕ್ಕೆ ಇರುವ ಮಾರ್ಗೋಪಾಯಗಳೇನು?, ನಮ್ಮ ಪೂರ್ವ ಸಿದ್ಧತೆ ಹೇಗಿರಬೇಕು ಎಂಬಿತ್ಯಾದಿ ವಿಚಾರಗಳ ಬಗ್ಗೆ ಲೋಕಸೇವಾ ಆಯೋಗದ ನಿವೃತ್ತ ಸಹಾಯಕ ಕಾರ್ಯದರ್ಶಿ ಗಣೇಶ್ ಪ್ರಸಾದ್ ಪಾಣೂರು ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದ ವಿದ್ಯಾರ್ಥಿಗಳಿಗಾಗಿ ನಡೆಸಿದ ಒಂದು ದಿನದ ಕಾರ್ಯಾಗಾರದಲ್ಲಿ ವಿವರಣೆ ನೀಡಿದರು. ಹತ್ತನೇ ತರಗತಿಯ ನಂತರ ಕಲಿಯಬಹುದಾದ ವಿವಿಧ ಕೋರ್ಸ್‍ಗಳ ಪರಿಚಯವನ್ನು ಮಾಡಿ, ಕಾಸರಗೋಡಿನ ಕನ್ನಡಿಗರಿಗೇ ದೊರಕಬಹುದಾದಂತಹ ಸರ್ಕಾರೀ ಉದ್ಯೋಗದ ಅವಕಾಶಗಳನ್ನು ತಿಳಿಹೇಳಿದರು. ಪಿ.ಎಸ್.ಸಿ. ಪರೀಕ್ಷೆಯನ್ನು ಬರೆಯುವುದರ ಬಗ್ಗೆ ಕಾಸರಗೋಡಿನ ಕನ್ನಡಿಗರು ಹಿಂದೇಟು ಹಾಕಬಾರದು. ಈ ಪರೀಕ್ಷೆಯು ಸರ್ಕಾರಿ ಉದ್ಯೋಗದ ಮುಖ್ಯ ದ್ವಾರವಾಗಿದೆ. ಪರೀಕ್ಷೆಯಲ್ಲಿ ಅತ್ಯಧಿಕ ಅಂಕಗಳಿಸಲು ವಿಷಯಾಧಾರಿತ ವಿಚಾರಗಳ ಬಗ್ಗೆ ಮಕ್ಕಳೊಂದಿಗೆ ಚರ್ಚಿಸಿದರು. ಪರೀಕ್ಷೆ ಬರೆದ ಕೂಡಲೇ ತೇರ್ಗಡೆಯಾಗಲಿಲ್ಲವೆಂದು ಮುಂದಿನ ಪರೀಕ್ಷೆ ಬರೆಯಲು ಹಿಂದೇಟು ಹಾಕಬಾರದು. ನಿರಂತರವಾಗಿ ಶ್ರಮಿಸುತ್ತಾ ಆಸಕ್ತಿ ಇರುವ ಉದ್ಯೋಗದ ವಿಷಯಾಧಾರಿತ ತರಬೇತಿಯನ್ನು ಪಡೆದಿರಬೇಕು. ವಿದ್ಯಾರ್ಥಿಗಳ ಮನದಲ್ಲಿ ಸರ್ಕಾರೀ ಉದ್ಯೋಗದ ಚಿಂತನೆಯು ಮೊಳಕೆಯೊಡೆಯುವಂತೆ ಪ್ರಶ್ನೋತ್ತರ ರೀತಿಯಲ್ಲಿ ತರಗತಿಯನ್ನು ನಡೆಸಿಕೊಟ್ಟರು.
ಶಾಲಾ ಸಂಚಾಲಕ ಜಯಪ್ರಕಾಶ ಪಜಿಲ ಅಧ್ಯಕ್ಷತೆ ವಹಿಸಿದ್ದರು. ಮುಖ್ಯೋಪಾಧ್ಯಾಯ ಸತ್ಯನಾರಾಯಣ ಶರ್ಮ ಪಂಜಿತ್ತಡ್ಕ ಪ್ರಾಸ್ತಾವಿಕ ಮಾತುಗಳನ್ನಾಡಿದರು. ವಿದ್ಯಾರ್ಥಿಗಳಾದ ಪ್ರಣವಿ ಸ್ವಾಗತಿಸಿ, ಸ್ವಸ್ತಿ ಕುಳೂರು ವಂದಿಸಿದರು.
ಕನ್ನಡ ಮಕ್ಕಳು ಸರ್ಕಾರೀ ಉದ್ಯೋಗಕ್ಕೆ ಆದ್ಯತೆಯನ್ನು ನೀಡಬೇಕು: ಪಿ.ಎಸ್.ಸಿ ಪರೀಕ್ಷೆಯ ಕುರಿತು ಮಾಹಿತಿ ಶಿಬಿರದಲ್ಲಿ ಗಣೇಶ್ ಪಾಣೂರು
0
ಮಾರ್ಚ್ 13, 2023
Tags