ನವದೆಹಲಿ: ಅಮೆರಿಕದ ಹಿಂಡೆನ್‌ಬರ್ಗ್ ವರದಿಯಿಂದ ಸೃಷ್ಟಿಗೊಂಡಿರುವ ಅದಾನಿ ಸಮೂಹಗಳ ಷೇರು ವಿವಾದದ ಕುರಿತು ಪರಿಶೀಲಿಸಲು ಸುಪ್ರೀಂ ಕೋರ್ಟ್ ಗುರುವಾರ ನಿವೃತ್ತ ನ್ಯಾಯಮೂರ್ತಿ ಅಭಯ್ ಮನೋಹರ್ ಸಪ್ರೆ ನೇತೃತ್ವದ ಸಮಿತಿ ರಚಿಸಿದೆ.
ನಿವೃತ್ತ ನ್ಯಾಯಮೂರ್ತಿ ಅಭಯ್ ಮನೋಹರ್ ಸಪ್ರೆ ನೇತೃತ್ವದ ಸಮಿತಿಯಲ್ಲಿ ಬ್ಯಾಂಕಿಂಗ್ ಕ್ಷೇತ್ರದ ಹಿರಿಯರಾದ ಕೆ.ವಿ.ಕಾಮತ್ ಮತ್ತು ಒಪಿ ಭಟ್, ಇನ್ಫೋಸಿಸ್ ಸಹ-ಸಂಸ್ಥಾಪಕ ನಂದನ್ ನಿಲೇಕಣಿ ಮತ್ತು ನಿವೃತ್ತ ನ್ಯಾಯಮೂರ್ತಿ ಜೆಪಿ ದೇವಧರ್ ಇರುತ್ತಾರೆ.
ಪ್ರಕರಣದಲ್ಲಿ ಅದಾನಿ ಸಮೂಹದ ಪಾತ್ರದ ಕುರಿತು ಸಮಿತಿ ತನಿಖೆ ನಡೆಸಲಿದೆ. ಷೇರುದಾರರ ಹಿತಾಸಕ್ತಿ ಕಾಪಾಡುವ ನಿಟ್ಟಿನಲ್ಲಿ ಜರುಗಿಸಬಹುದಾದ ಕ್ರಮಗಳ ವರದಿ ನೀಡಲಿದೆ.
ಪ್ರಕರಣದಲ್ಲಿ ಹೂಡಿಕೆದಾರರನ್ನು ರಕ್ಷಿಸುವಂತೆ ಕೋರಿದ್ದ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್, ಮಾರುಕಟ್ಟೆ ನಿಯಂತ್ರಕ ಸೆಬಿ ನಡೆಸುತ್ತಿರುವ ತನಿಖೆಯನ್ನು ಎರಡು ತಿಂಗಳಲ್ಲಿ ಪೂರ್ಣಗೊಳಿಸಬೇಕು ಮತ್ತು ಇದರ ವರದಿಯನ್ನು ಸಲ್ಲಿಸಬೇಕು ಎಂದು ಆದೇಶಿಸಿದರು.
ನಿಯಮಗಳ ಉಲ್ಲಂಘನೆಯಾಗಿದೆಯೇ ಮತ್ತು ಷೇರುಗಳ ಬೆಲೆ ತಿರುಚಲಾಗಿದೆಯೆ ಎಂಬ ಕುರಿತಾಗಿಯೂ ತನಿಖೆ ನಡೆಸುವಂತೆ ಸುಪ್ರೀಂ ಕೋರ್ಟ್ ಸೆಬಿಗೆ ಸೂಚಿಸಿದೆ.