ಚೆನ್ನೈ: ಮಲ್ಟಿಫ್ಲೆಕ್ಸ್‌ಗೆ ಸಿನಿಮಾ ನೋಡಲು ಬಂದಿದ್ದ ಅಲೆಮಾರಿ ಜನಾಂಗದವರನ್ನು ಅಲ್ಲಿನ ಸಿಬ್ಬಂದಿ ತಡೆದಿರುವ ಘಟನೆ ತಮಿಳುನಾಡಿನಲ್ಲಿ ವಿವಾದವನ್ನುಂಟು ಮಾಡಿದೆ.
ಚೆನ್ನೈನ ಕೋಯಾಂಬೆಡು ಬಳಿಯ 'ರೋಹಿಣಿ ಸಿಲ್ವರ್ ಸ್ಕ್ರೀನ್ಸ್' ಎಂಬ ಮಲ್ಟಿಫ್ಲೆಕ್ಸ್‌ಗೆ 'ನಾರಿಕುರುವ' ಎಂಬ ಅಲೆಮಾರಿ ಜನಾಂಗದ ಮಹಿಳೆ, ಮಕ್ಕಳು ಸೇರಿ ಐದಾರು ಜನ ಸಿಲಂಬರಸನ್ ಅವರ 'ಪಾಠು ತಲಾ' ಸಿನಿಮಾ ನೋಡಲು ಗುರುವಾರ ಬೆಳಿಗ್ಗೆ ಬಂದಿದ್ದರು.
ಇವರೆಲ್ಲ ಟಿಕೆಟ್ ಖರೀದಿಸಿಯೇ ಸಿನಿಮಾ ನೋಡಲು ಬಂದಿದ್ದರು. ಆದರೆ, ತಪಾಸಣೆ ಗೇಟ್ ಬಳಿ ರೋಹಿಣಿ ಸಿಲ್ವರ್ ಸ್ಕ್ರೀನ್ಸ್ ಸಿಬ್ಬಂದಿ, ಅಲೆಮಾರಿ ಜನಾಂಗದವರನ್ನು ಚಿತ್ರಮಂದಿರದ ಒಳಗೆ ಹೋಗದಂತೆ ತಡೆಹಿಡಿದಿದ್ದಾರೆ.
ಈ ಘಟನೆಗೆ ಸಂಬಂಧಿಸಿದ ಸುದ್ದಿ ಹಾಗೂ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ನಂತರ ವಿವಾದವುಂಟಾಗಿ, ಅನೇಕರು ರೋಹಿಣಿ ಸಿಲ್ವರ್ ಸ್ಕ್ರೀನ್ಸ್ ಅನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. 'ಇದು ಅಮಾನವೀಯ' ನಡೆ ಎಂದು ಖಂಡಿಸಿದ್ದಾರೆ.
ಬಳಿಕ ಎಚ್ಚೆತ್ತುಕೊಂಡು ಸ್ಪಷ್ಟನೆ ನೀಡಿರುವ ರೋಹಿಣಿ ಸಿಲ್ವರ್ ಸ್ಕ್ರೀನ್ಸ್ ಸಂಸ್ಥೆ, ಗುರುವಾರ ಬೆಳಿಗ್ಗೆ ಪಾಠು ತಲಾ ಸಿನಿಮಾ ನೋಡಲು ಬಂದಿದ್ದ ಅಲೆಮಾರಿ ಜನಾಂಗದವರನ್ನು ತಡೆದಿದ್ದು, ಅವರಲ್ಲಿ ಮಕ್ಕಳಿದ್ದಾರೆ ಎಂಬ ಕಾರಣಕ್ಕೆ ಎಂದು ಹೇಳಿದೆ.
'ಪಾಠು ತಲಾ' ಸಿನಿಮಾ U/A ಪ್ರಮಾಣಪತ್ರ ಇರುವ ಸಿನಿಮಾ. ಹಾಗಾಗಿ 12 ವರ್ಷಕ್ಕಿಂತ ಕೆಳಗಿದ್ದ ಅವರನ್ನು ಚೆಕಿಂಗ್ ಕೌಂಟರ್ ಬಳಿ ತಡೆಯಲಾಗಿತ್ತು. ನಂತರ ಅವರಿಗೆ ಸಿನಿಮಾ ನೋಡಲು ಅನುಮತಿ ಕೊಡಲಾಗಿತ್ತು, ಸಿನಿಮಾ ನೋಡಿ ತೆರಳಿದ್ದಾರೆ ಎಂದು ಹೇಳಿ ಅವರು ಮಲ್ಟಿಫ್ಲೆಕ್ಸ್‌ನಲ್ಲಿ ಕುಳಿತು ಸಿನಿಮಾ ನೋಡಿದ್ದ ವಿಡಿಯೊವನ್ನು ಸ್ಪಷ್ಟನೆ ಜೊತೆಗೆ ಹಂಚಿಕೊಂಡಿದೆ.
ಆದರೆ, ರೋಹಿಣಿ ಸಿಲ್ವರ್ ಸ್ಕ್ರೀನ್‌ನ ಈ ನಡೆಗೆ ಅನೇಕರು ವಿರೋಧ ವ್ಯಕ್ತಪಡಿಸಿದ್ದು ಅನುಮತಿ ಇಲ್ಲದೇ ವಿಡಿಯೊ ತೆಗೆದು ಪ್ರಕಟಿಸಿದ್ದು ತಪ್ಪು. ಇದು ಅಮಾಯಕರನ್ನು ಗೇಲಿ ಮಾಡುವ ರೀತಿ ಇದೆ ಎಂದು ಹೇಳಿದ್ದಾರೆ. ಇನ್ನು ಕೆಲವರು, ಸರ್ಕಾರ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ರೋಹಿಣಿ ಸಿಲ್ವರ್ ಸ್ಕ್ರೀನ್ಸ್ ಅನ್ನು ಮುಚ್ಚಿಸಬೇಕು ಎಂದು ಒತ್ತಾಯಿಸಿದ್ದಾರೆ. ಜೊತೆಗೆ ಬೇರೆ ಬೇರೆಯವರು ಮಕ್ಕಳ ಜೊತೆ ಮಲ್ಟಿಫ್ಲೆಕ್ಸ್‌ನಲ್ಲಿ ಕುಳಿತು ಈ ಸಿನಿಮಾ ನೋಡುತ್ತಿರುವ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.
'ಪಾಠು ತಲಾ' ಸಿನಿಮಾ ಎನ್. ಕೃಷ್ಣಾ ಅವರ ನಿರ್ದೇಶನದಲ್ಲಿ ಇತ್ತೀಚೆಗೆ ಬಿಡುಗಡೆಯಾಗಿದೆ. ಈ ಚಿತ್ರ ಕನ್ನಡದ ಮಫ್ತಿ ಸಿನಿಮಾದ ರಿಮೇಕ್ ಆಗಿದೆ.