ನವದೆಹಲಿ : ಹಣಕಾಸು ವಂಚನೆಯನ್ನು ನಡೆಸಲು ಸೈಬರ್ ಕ್ರಿಮಿನಲ್ ಗಳಿಂದ ಆಧಾರ್ ಸಕ್ರಿಯ ಪಾವತಿ ವ್ಯವಸ್ಥೆ (ಎಇಪಿಎಸ್)ಯ ದುರುಪಯೋಗದ ಕುರಿತು ಕೇಂದ್ರ ಗೃಹಸಚಿವಾಲಯ (ಎಂಎಚ್‌ಎ)ವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಎಚ್ಚರಿಕೆ ನೀಡಿದೆ.
ಸೈಬರ್ ಅಪರಾಧಗಳಿಗೆ ಸಂಬಂಧಿಸಿದ ವಿಷಯಗಳನ್ನು ನಿಭಾಯಿಸಲು ಗೃಹ ಸಚಿವಾಲಯದ ನೋಡಲ್ ಏಜೆನ್ಸಿಯಾಗಿರುವ ಇಂಡಿಯನ್ ಸೈಬರ್ ಕ್ರೈಮ್ ಕೋಆರ್ಡಿನೇಷನ್ ಸೆಂಟರ್ (ಐ4ಸಿ) ಫೆ.21ರಂದು ಬರೆದಿರುವ ಪತ್ರದಲ್ಲಿ, ಕ್ರಯಪತ್ರಗಳು ಮತ್ತು ಒಪ್ಪಂದಗಳನ್ನು ಹೊಂದಿರುವ ರಾಜ್ಯಗಳ ನೋಂದಣಿ ವೆಬ್ಸೈಟ್ ಗಳಲ್ಲಿ ಅಪ್ಲೋಡ್ ಮಾಡಲಾಗಿರುವ ಬಳಕೆದಾರರ ಆಧಾರ್ ಬಯೊಮೆಟ್ರಿಕ್ ಡೇಟಾ ಅಥವಾ ಜೈವಿಕ ದತ್ತಾಂಶಗಳನ್ನು ಸೈಬರ್ ಕ್ರಿಮಿನಲ್ಗಳು ಕ್ಲೋನ್ ಅಥವಾ ತದ್ರೂಪಿ ಸೃಷ್ಟಿ ಮಾಡುತ್ತಿದ್ದಾರೆ ಎಂದು ತಿಳಿಸಿದೆ.
ಎಇಪಿಎಸ್ ಮೂಲಕ ಅನಧಿಕೃತವಾಗಿ ಹಣ ಹಿಂದೆಗೆದುಕೊಳ್ಳಲು ಮಾಹಿತಿಗಳನ್ನು ಕ್ಲೋನ್ ಮಾಡಲಾಗುತ್ತದೆ ಎಂದು ತಿಳಿಸಿರುವ ಐ4ಸಿ, ನೋಂದಣಿ ವೆಬ್ಸೈಟ್ ಗಳಿಗೆ ದಾಖಲೆಗಳನ್ನು ಅಪ್ಲೋಡ್ ಮಾಡುವಾಗ ಬೆರಳಚ್ಚುಗಳನ್ನು 'ಮಾಸ್ಕ್' ಮಾಡುವಂತೆ ತಮ್ಮ ಕಂದಾಯ ಮತ್ತು ನೋಂದಣಿ ಇಲಾಖೆ ನಿರ್ದೇಶನ ನೀಡುವಂತೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಿದೆ.
ಇಂತಹ ಅಪರಾಧಗಳ ದೂರುಗಳ ಕುರಿತು ತನಿಖೆ ನಡೆಸುವಂತೆ, ಸಂತ್ರಸ್ತರನ್ನು ಸಂವೇದನಾಶೀಲಗೊಳಿಸುವಂತೆ ಮತ್ತು ಜಾಗ್ರತಿ ಅಭಿಯಾನಗಳನ್ನು ನಡೆಸುವಂತೆಯೂ ಐ4ಸಿ ರಾಜ್ಯದ ಏಜೆನ್ಸಿಗಳಿಗೆ ಸಲಹೆ ನೀಡಿದೆ. ಯಾವುದೇ ಬಳಕೆದಾರ ನಗದನ್ನು ಜಮಾ ಮಾಡಲು ಮತ್ತು ಹಿಂಪಡೆಯಲು,ಹಣವನ್ನು ವರ್ಗಾಯಿಸಲು ಹಾಗೂ ಆಧಾರ್ ಸಂಖ್ಯೆ ಮತ್ತು ಬಯೊಮೆಟ್ರಿಕ್ಗಳನ್ನು ಬಳಸಿ ವಿವರಗಳನ್ನು ಪರಿಶೀಲಿಸಲು ಎಇಪಿಎಸ್ ಅವಕಾಶವನ್ನು ನೀಡುತ್ತದೆ,ಹೀಗಾಗಿ ಸೈಬರ್ ಕ್ರಿಮಿನಲ್ ಗಳು ಹಣಕಾಸು ವಂಚನೆಗಳನ್ನು ನಡೆಸಲು ಅದರ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದು ಅದು ತಿಳಿಸಿದೆ.
ಕಾರ್ಯವಿಧಾನ
ದೂರುಗಳ ಸ್ವರೂಪ ಮತ್ತು ಸಂಬಂಧಿತ ಡೇಟಾವನ್ನು ತಾನು ವಿಶ್ಲೇಷಿಸಿದ್ದೇನೆ ಮತ್ತು
ಸೈಬರ್ಕ್ರಿಮಿನಲ್ಗಳು ಅಳವಡಿಸಿಕೊಂಡಿರುವ ವಿಧಾನವನ್ನು ತಿಳಿದುಕೊಳ್ಳಲು ಪೊಲೀಸ್
ಸಂಸ್ಥೆಗಳು ಮತ್ತು ತನಿಖಾ ಸಂಸ್ಥೆಗಳೊಂದಿಗೆ ಸಮಾಲೋಚಿಸಿರುವುದಾಗಿ ಐ4ಸಿ ಪತ್ರದಲ್ಲಿ
ತಿಳಿಸಿದೆ.
ರಾಜ್ಯಗಳ ನೋಂದಣಿ ವೆಬ್ಸೈಟ್ಗಳಲ್ಲಿ ಅಪ್ಲೋಡ್ ಮಾಡಲಾಗಿರುವ ಬಯೊಮೆಟ್ರಿಕ್ ಮಾಹಿತಿಗಳನ್ನು (ಕ್ರಯ ಪತ್ರಗಳು,ಒಪ್ಪಂದಗಳು ಇತ್ಯಾದಿ) ಕ್ರಿಮಿನಲ್ಗಳು ಡೌನ್ಲೋಡ್ ಮಾಡಿಕೊಳ್ಳುತ್ತಾರೆ ಮತ್ತು ನಂತರ ಎಇಪಿಎಸ್ ಬಳಸಿ ಅನಧಿಕೃತ ಹಿಂಪಡೆಯುವಿಕೆ ನಡೆಸಲು ಅದನ್ನು ಇನ್ನಷ್ಟು 'ಕ್ಲೋನ್ ' ಮಾಡುತ್ತಾರೆ ಎನ್ನುವುದು ಎಇಪಿಎಸ್ ಸೈಬರ್ ಹಣಕಾಸು ವಂಚನೆಗಳ ಕಾರ್ಯವಿಧಾನದ ವಿಶ್ಲೇಷಣೆಯು ಬಹಿರಂಗಗೊಳಿಸಿದೆ ಎಂದು ಅದು ವಿವರಿಸಿದೆ.