ನವದೆಹಲಿ: ಸಂಪತ್ತಿನ ದುರಾಸೆ ಭ್ರಷ್ಟಾಚಾರವನ್ನು ಕ್ಯಾನ್ಸರ್ ನಂತೆ ಬೆಳೆಯಲು ಅನುಕೂಲ ಮಾಡಿಕೊಟ್ಟಿದೆ ಮತ್ತು ಮತ್ತು ಸಾಂವಿಧಾನಿಕ ನ್ಯಾಯಾಲಯಗಳು ಭ್ರಷ್ಟಾಚಾರದ ಬಗ್ಗೆ ಶೂನ್ಯ ಸಹಿಷ್ಣುತೆಯನ್ನು ತೋರಿಸಲು ಮತ್ತು ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ದೇಶದ ಜನರಿಗೆ ಕರ್ತವ್ಯ ಬದ್ಧವಾಗಿವೆ ಎಂದು ಸುಪ್ರೀಂಕೋರ್ಟ್ ಹೇಳಿದೆ.
ಸಂಪತ್ತಿನ ಸಮಾನ ಹಂಚಿಕೆ ಗುರಿ ಸಾಧನೆಗಾಗಿ ಶ್ರಮಿಸುವ ಮೂಲಕ ಭಾರತದ ಜನರಿಗೆ ಸಾಮಾಜಿಕ ನ್ಯಾಯವನ್ನು ಭದ್ರಪಡಿಸುವ ಸಂವಿಧಾನದ 'ಪ್ರಸ್ತಾವನೆಯಲ್ಲಿನ ಭರವಸೆ' ಸಾಧಿಸುವಲ್ಲಿ ಭ್ರಷ್ಟಾಚಾರವು ಒಂದು ಪ್ರಮುಖ ಅಡಚಣೆಯಾಗಿದೆ ಎಂದು ಉನ್ನತ ನ್ಯಾಯಾಲಯ ತಿಳಿಸಿದೆ.
ಅಕ್ರಮ ಆಸ್ತಿ ಗಳಿಕೆ ಆರೋಪದಲ್ಲಿ ಛತ್ತೀಸ್ ಗಢದ ಮಾಜಿ ಪ್ರಧಾನ ಕಾರ್ಯದರ್ಶಿ ಅಮನ್ ಸಿಂಗ್ ಮತ್ತು ಅವರ ಪತ್ನಿ ವಿರುದ್ಧ ದಾಖಲಾಗಿದ್ದ ಎಫ್‌ಐಆರ್ ಅನ್ನು ರದ್ದುಗೊಳಿಸಿದ ಹೈಕೋರ್ಟ್ ಆದೇಶ ರದ್ದುಪಡಿಸುವ ಸಂದರ್ಭದಲ್ಲಿ ನ್ಯಾಯಮೂರ್ತಿಗಳಾದ ಎಸ್ ರವೀಂದ್ರ ಭಟ್ ಮತ್ತು ದೀಪಂಕರ್ ದತ್ತಾ ಅವರ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿತು.
ಸಂಪತ್ತಿನ ಸಮಾನ ಹಂಚಿಕೆ ಗುರಿ ಸಾಧನೆಗಾಗಿ ಶ್ರಮಿಸುವ ಮೂಲಕ ಭಾರತದ ಜನರಿಗೆ ಸಾಮಾಜಿಕ ನ್ಯಾಯವನ್ನು ಭದ್ರಪಡಿಸುವುದು ಸಂವಿಧಾನದ ಪ್ರಸ್ತಾವನೆಯ ಭರವಸೆಯಾಗಿದ್ದರೂ, ಅದು ಇನ್ನೂ ದೂರದ ಕನಸಾಗಿದೆ. ಈ ಗುರಿ ಸಾಧನೆಯಲ್ಲಿ ಭ್ರಷ್ಟಾಚಾರ ಪ್ರಮುಖ ಅಡ್ಡಿಯಾಗಿದೆ ಎಂದು ಹೇಳಿತು.
ಭ್ರಷ್ಟಾಚಾರವು ಒಂದು ಅಸ್ವಸ್ಥತೆಯಾಗಿದೆ, ಜೀವನದ ಪ್ರತಿಯೊಂದು ರಂಗದಲ್ಲಿಯೂ ಅದು ವ್ಯಾಪಿಸಿದೆ. ಈಗ ಇದು ಆಡಳಿತದ ಚಟುವಟಿಕೆಗಳ ಕ್ಷೇತ್ರಗಳಿಗೆ ಸೀಮಿತವಾಗಿಲ್ಲ, ಇದೊಂದು ಜೀವನದ ಭಾಗವಾಗಿದೆ ಎಂದು ಜವಾಬ್ದಾರಿಯುತ ನಾಗರಿಕರು ಹೇಳುವುದು ವಿಷಾಧನೀಯ ಎಂದು ನ್ಯಾಯಪೀಠ ಹೇಳಿತು.