ಕಾಸರಗೋಡು: ಜಿಲ್ಲೆಯ ಭೂ ರಹಿತ ಗಿರಿಜನರಿಗೆ ತಲಾ ಒಂದು ಎಕರೆ ಭೂಮಿ ಮಂಜೂರು ಮಾಡುವುದಾಗಿ ಭರವಸೆ ನೀಡಿ, ನಂತರ ವಂಚಿಸುತ್ತಿರುವ ಅಧಿಕಾರಿಗಳ ಧೋರಣೆ ಖಂಡನೀಯ ಎಂದು ಗೋತ್ರ ಜನತಾ ಭೂಸಮರ ಸಮಿತಿ ಜಿಲ್ಲಾಧ್ಯಕ್ಷ ಎಂ.ಕೃಷ್ಣನ್ ಸುದ್ದಿಗೋಷ್ಠೀಯಲ್ಲಿ ತಿಳಿಸಿದ್ದಾರೆ.
ಪ್ರಸಕ್ತ ಜಿಲ್ಲೆಯಲ್ಲಿ 120ಕ್ಕೂ ಹೆಚ್ಚು ಕುಟುಂಬಗಳು ಈ ರೀತಿ ವಂಚನೆಗೊಳಗಾಗಿದೆ. ಪನತ್ತಡಿ ಪಂಚಾಯತ್‍ನ 150 ಕುಟುಂಬಗಳಿಗೆ ತಲಾ 50 ಸೆಂಟ್ಸ್ ಕೃಷಿ ಭೂಮಿಯನ್ನು ಒದಗಿಸುವ ಬಗ್ಗೆ ಭರವಸೆ ನೀಡಲಾಯಿತು. ನಂತರ ಅದನ್ನು 10 ಸೆಂಟ್ಸ್‍ಗೆ ಕಡಿತಗೊಳಿಸಲಾಯಿತು. ಬಾಕಿ ಉಳಿದ 40 ಸೆಂಟ್ಸ್ ಜಾಗವನ್ನು ಅರಣ್ಯ ಪ್ರದೇಶದಲ್ಲಿ ನೀಡಿ, ಅಲ್ಲಿ ಯಾವುದೇ ಮರಗಳನ್ನು ಕಡಿಯದಂತೆ ಆದೇಶ ನೀಡಿದ್ದು, ಇದರಿಂದ ಲಭಿಸಿದ ಭೂಮಿಯಲ್ಲಿ ಯಾವುದೇ ಕೃಷಿ ನಡೆಸಲಾಗದ ಸ್ಥಿತಿಯಿದೆ.
ಆದಿವಾಸಿ ಸಮುದಾಯಕ್ಕೆ ಅರ್ಹ ಭೂಮಿ ಮಂಜೂರಾಗಿ ಲಭಿಸುವ ನಿಟ್ಟಿನಲ್ಲಿ ಕಳೆದ ಒಂದೂವರೆ ವರ್ಷದಿಂದ ನಡೆಯುತ್ತಿರುವ ಧರಣಿಯನ್ನು ವಿವಿಧ ಹಂತಗಳಲ್ಲಿ ಬುಡಮೇಲುಗೊಳಿಸಲು ಆಡಳಿತಾರೂಢ ಸಂಘಟನೆಗಳು ಮುಂದಾಗಿದೆ. ಸರ್ಕಾರದ ರಹಸ್ಯ ಅಜೆಂಡಾ ಜಾರಿಗೊಳಿಸಲು ಈ ಆಡಳಿತ ಸಂಘಟನೆಗಳು ಯತ್ನಿಸುತ್ತಿದೆ. ವಾಸ್ತವತೆ ಮುಚ್ಚಿಹಾಕುವ ಮೂಲಕ ಅಧಿಕಾರಿಗಳ ದುರಾಡಳಿತ ಎದ್ದುಕಾಣುತ್ತಿದೆ. ಅಧಿಕಾರಿಗಳ ಇಂತಹ ಧೋರಣೆ ವಿರುದ್ಧ ಸಂಘಟನೆ ಹೋರಾಟ ಮತ್ತಷ್ಟು ಬಲಪಡಿಸಲಿರುವುದಾಗಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಕೆ.ಎಂ.ಮಧು, ಕೃಷ್ಣನ್ ವೆಳ್ಳಾಲ, ರಂಜಿನಿ ನೆಲ್ಲಿಕಟ್ಟೆ,, ನಾರಾಯಣನ್ ಕವುಂಗಲ್, ಮಂಜುಷಾ ಕೋಳಿಚ್ಚಲ್, ನಿಶಾ ವೆಳ್ಳರಿಕುಂಡು ಉಪಸ್ಥಿತರಿದ್ದರು.
ಆದಿವಾಸಿ ಜನತೆಗೆ ಭೂಮಿ ಮಂಜೂರು: ಈಡೇರದ ಭರವಸೆ: ಮತ್ತೆ ಪ್ರತಿಭಟನೆ
0
ಮಾರ್ಚ್ 02, 2023
Tags