ಡೆಲ್ ಮಾರ್: ಜನರ ಸಮಸ್ಯೆಯೆಂದರೆ, ಅವರು ತಮ್ಮ ಮೊಬೈಲ್ ಫೋನ್‍ಗಳತ್ತ ತೀರಾ ಹೆಚ್ಚು ಕಣ್ಣಾಡಿಸುತ್ತಾರೆ.. ಹೀಗೆ ಹೇಳಿರುವುದು ಬೇರೆ ಯಾರೂ ಅಲ್ಲ; 50 ವರ್ಷಗಳ ಹಿಂದೆ ಮೊಬೈಲ್ ಫೋನ್ ಸಂಶೋಧಿಸಿದ, ಮೊಬೈಲ್ ಫೋನ್‍ಗಳ ಜನಕ ಎಂದೇ ಹೆಸರಾಗಿರುವ ಮಾರ್ಟಿನ್ ಕೂಪರ್.
ಅಮೆರಿಕಾದ ತಂತ್ರಜ್ಞರಾದ ಮಾರ್ಟಿನ್ ಕೂಪರ್ ಪ್ರಕಾರ, ನಮ್ಮ ಜೇಬಿನಲ್ಲಿರುವ ಪುಟ್ಟ ಸಾಧನವು ಗಡಿಮೀರಿದ ಸಾಮರ್ಥ್ಯವನ್ನು ಹೊಂದಿದ್ದು, ಒಂದು ದಿನ ಕಾಯಿಲೆಯನ್ನೂ ಜಯಿಸಲು ನೆರವು ಒದಗಿಸುತ್ತದೆ. ಆದರೆ, ಸದ್ಯ ನಾವು ಅದರ ಬಗ್ಗೆ ತೀರಾ ವ್ಯಾಮೋಹಕ್ಕೊಳಗಾಗಿದ್ದೇವೆ ಎನ್ನುತ್ತಾರೆ.
'ಓರ್ವ ವ್ಯಕ್ತಿ ತನ್ನ ಮೊಬೈಲ್ ಫೋನ್ ಕಡೆ ನೋಡುತ್ತಾ ರಸ್ತೆಯನ್ನು ದಾಟುವುದನ್ನು ನೋಡಿ ನಾನು ಕುಸಿದು ಹೋಗಿದ್ದೆ. ಜನರು ಅಷ್ಟರ ಮಟ್ಟಿಗೆ ತಮ್ಮ ಏಕಾಗ್ರತೆ ಕಳೆದುಕೊಂಡಿದ್ದಾರೆ' ಎಂದು 94 ವರ್ಷದ ಆ ಹಿರಿಯ ತಂತ್ರಜ್ಞ ಕ್ಯಾಲಿಫೋರ್ನಿಯಾದ ಡೆಲ್ ಮಾರ್ ನಲ್ಲಿರುವ ತಮ್ಮ ಕಚೇರಿಯಲ್ಲಿ AFP ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
'ಆದರೆ, ಕೆಲವು ವ್ಯಕ್ತಿಗಳು ಕಾರಿನಲ್ಲಿ ತಮ್ಮನ್ನು ಹಾದು ಹೋದಾಗ ಮಾತ್ರ ಅವರು ವಾಸ್ತವಕ್ಕೆ ಮರಳುತ್ತಾರೆ' ಎಂದು ಅವರು ಹಾಸ್ಯ ಮಾಡಿದ್ದಾರೆ.
'ನನಗೆ ನನ್ನ ಮೊಮ್ಮಕ್ಕಳು ಹಾಗೂ ಮರಿ ಮಕ್ಕಳು ಬಳಸುವಂತೆ ಮೊಬೈಲ್ ಫೋನ್ ಅನ್ನು ಬಳಸುವುದು ತಿಳಿಯುವುದಿಲ್ಲ' ಎಂದೂ ಅವರು ಹೇಳಿದ್ದಾರೆ.
'ನಾನು ಏಪ್ರಿಲ್ 3, 1973ರಲ್ಲಿ ಮೊಬೈಲ್ ಕರೆ ಮಾಡಿದ ಪ್ರಪ್ರಥಮ ಮೊಬೈಲ್ ಫೋನ್ ಖಂಡಿತ ಉದ್ದವಿದ್ದು, ಅದರೊಳಗೆ ಭಾರಿ ಗಾತ್ರದ ತಂತಿಗಳು ಹಾಗೂ ಸರ್ಕ್ಯೂಟ್‍ಗಳಿದ್ದವು' ಎಂದು ಐಫೋನ್ ಬಳಸುವ ಕೂಪರ್ ಹೇಳುತ್ತಾರೆ.
'ಭವಿಷ್ಯದಲ್ಲಿ ಮೊಬೈಲ್ ಫೋನ್ ಶಿಕ್ಷಣ ಕ್ಷೇತ್ರ ಹಾಗೂ ಆರೋಗ್ಯ ಸೇವಾ ವಲಯದಲ್ಲಿ ಕ್ರಾಂತಿ ಮಾಡಲಿದೆ' ಎಂದೂ ಭವಿಷ್ಯ ನುಡಿದ ಮಾರ್ಟಿನ್ ಕೂಪರ್, 'ಇದು ಕೆಲವರಿಗೆ ಉತ್ಪ್ರೇಕ್ಷೆಯಂತೆ ಕೇಳಿಸಬಹುದು. ಆದರೆ, ಇನ್ನೊಂದೆರಡು ತಲೆಮಾರು ಕಳೆಯುವುದರೊಳಗೆ ನಾವು ರೋಗಗಳ ಮೇಲೆ ವಿಜಯ ಸಾಧಿಸಿರುತ್ತೇವೆ' ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸದ್ಯ ನಾವು ನಮ್ಮ ಫೋನ್‍ಗಳ ಕುರಿತು ವಿವೇಚನಾರಹಿತವಾಗಿ ವರ್ತಿಸುತ್ತಿದ್ದೇವೆ. ಆದರೆ, ಅದೇ ಕೊನೆಯಲ್ಲ ಎನ್ನುವ ಮಾರ್ಟಿನ್ ಕೂಪರ್, ಪ್ರತಿ ತಲೆಮಾರೂ ಹೆಚ್ಚು ಸೂಕ್ಷ್ಮವಾಗುತ್ತದೆ. ಅವರು ಮೊಬೈಲ್ ಫೋನ್‍ಗಳನ್ನು ಇನ್ನೂ ಹೆಚ್ಚು ಪರಿಣಾಮಕಾರಿಯಾಗಿ ಬಳಸುವುದನ್ನು ಕಲಿಯಲಿದ್ದಾರೆ' ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮನುಷ್ಯರು ಇದನ್ನು ಶೀಘ್ರ ಅಥವಾ ತಡವಾಗಿ ಗುರುತಿಸಲಿದ್ದಾರೆ ಎಂದು ಅವರು ಹೇಳಿದ್ದಾರೆ.