ಚೆನ್ನೈ: ಆನ್‌ಲೈನ್ ಜೂಜಾಟಕ್ಕೆ ನಿಷೇಧ ಹೇರುವ ಮಸೂದೆಯನ್ನು ತಮಿಳುನಾಡು ವಿಧಾನಸಭೆಯಲ್ಲಿ ಗುರುವಾರ ಮತ್ತೊಮ್ಮೆ ಸರ್ವಾನುಮತದಿಂದ ಅಂಗೀಕರಿಸಲಾಯಿತು.
ರಾಜ್ಯಪಾಲ ಆರ್. ಎನ್. ರವಿ ಅವರು, ಮಸೂದೆಯನ್ನು ಮರುಪರಿಶೀಲಿಸುವಂತೆ ಸರ್ಕಾರಕ್ಕೆ ವಾಪಸ್ ಕಳುಹಿಸಿದ ಹಿನ್ನೆಲೆಯಲ್ಲಿ ಮತ್ತೆ ಅಂಗೀಕರಿಸಲಾಯಿತು.
ಮಸೂದೆಯನ್ನು ಮಂಡಿಸಿದ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು, ಆನ್‌ಲೈನ್ ಜೂಜಾಟಕ್ಕೆ ಬಲಿಯಾದವರನ್ನು ಉಲ್ಲೇಖಿಸಿದರು.
ಆನ್‌ಲೈನ್ ಜೂಜಾಟದಿಂದ ಹಣ ಕಳೆದುಕೊಂಡು ಹಲವು ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದೂ ಹೇಳಿದರು.
ಮಸೂದೆಯನ್ನು ಬೆಂಬಲಿಸಿ ಹಾಗೂ ರಾಜ್ಯಪಾಲರ ನಡೆಗೆ ವಿರೋಧ ವ್ಯಕ್ತಪಡಿಸಿ ಹಲವು ಮಂದಿ ಸದಸ್ಯರು ಮಾತನಾಡಿದರು.
ಬಳಿಕ ಸಭಾಧ್ಯಕ್ಷ ಎಂ.ಅಪ್ಪಾವು ಅವರು ಮಸೂದೆಯನ್ನು ಸರ್ವಾನುಮತದಿಂದ ಅಂಗೀಕರಿಸಿರುವುದಾಗಿ ಘೋಷಿಸಿದರು.
ವಿರೋಧ ಪಕ್ಷ ಎಐಎಡಿಎಂಕೆ ನಾಯಕತ್ವದ ಒಡಕು ಇದೇ ವೇಳೆ ಸದನದಲ್ಲಿ ಬಹಿರಂಗಗೊಂಡಿತು. ಉಚ್ಚಾಟಿತ ಮುಖಂಡ ಒ. ಪನ್ನೀರ್‌ಸೆಲ್ವಂ ಅವರಿಗೆ ಸಭಾಧ್ಯಕ್ಷರು ಮಾತನಾಡಲು ಅನುಮತಿ ನೀಡಿದ್ದಕ್ಕೆ ವಿರೋಧ ಪಕ್ಷದ ನಾಯಕ ಕೆ.ಪಳನಿಸ್ವಾಮಿ ಮತ್ತು ಎಐಎಡಿಎಂಕೆಯ ಕೆಲವು ಶಾಸಕರು ವಿರೋಧ ವ್ಯಕ್ತಪಡಿಸಿದರು.
ಪನ್ನೀರ್‌ಸೆಲ್ವಂ ಅವರಿಗೆ ಎಐಎಡಿಎಂಕೆ ಸದಸ್ಯ ಎನ್ನುವ ಕಾರಣಕ್ಕೆ ಮಾತನಾಡಲು ಅನುಮತಿ ನೀಡಿಲ್ಲ. ಅವರು ಮಾಜಿ ಮುಖ್ಯಮಂತ್ರಿಗಳಾಗಿರುವುದರಿಂದ ನೀಡಲಾಗಿದೆ ಎಂದು ಸಭಾಧ್ಯಕ್ಷರು ಹೇಳಿದರು.