ಸಿಮ್ ಕಾರ್ಡ್, ಕಂಪ್ಯೂಟರ್ ಸಿಪಿಯು, ಪ್ರಿಂಟೆಡ್ ಸರ್ಕ್ಯೂಟ್ ಬೋರ್ಡ್, ಪ್ರಿಂಟರ್ ಹೆಡ್ ಮುಂತಾದ ಎಲೆಕ್ಟ್ರಾನಿಕ್ ಉಪಕರಣಗಳಲ್ಲಿ ಚಿನ್ನವನ್ನು ಬಳಸುವುದು ಎಲ್ಲರಿಗೂ ತಿಳಿದ ವಿಚಾರವೇ.
ಆದರೆ, ಬಹುತೇಕ ಈ ಉಪಕರಣಗಳು ಹಾಳಾದ ಮೇಲೆ ಅವನ್ನು ತ್ಯಾಜ್ಯವೆಂದು ಬಿಸಾಡುವುದೇ ಹೆಚ್ಚು. ಆದರೆ, ಈಗ ಕಸದಿಂದ ಚಿನ್ನವನ್ನು ತೆಗೆಯುವ ಹೊಸ ತಂತ್ರಜ್ಞಾನದ ಶೋಧವಾಗಿದೆ. ಅದೂ ಅಲ್ಲದೇ, ಆ ಚಿನ್ನವನ್ನು ಔಷಧವಾಗಿ ಬಳಸುವ ಸಾಧ್ಯತೆಗಳನ್ನೂ ಕಂಡುಕೊಳ್ಳಲಾಗಿದೆ.
ಇಟಲಿಯ ಕಾಗ್ಲಿಯರಿ ವಿಶ್ವವಿದ್ಯಾಲಯ ಹಾಗೂ ಇಂಪೀರಿಯಲ್ ಕಾಲೇಜ್ ಆಫ್ ಲಂಡನ್ ಸಂಶೋಧಕರು ಈ ಹೊಸ ತಂತ್ರಜ್ಞಾನವನ್ನು ಶೋಧಿಸಿ ಪೇಟೆಂಟ್ ನೋಂದಣಿಯನ್ನು ಮಾಡಿಸಿದ್ದಾರೆ. ಪ್ರತಿಷ್ಠಿತ 'ಎಸಿಎಸ್ ಸಸ್ಟೇನಬಲ್ ಕೆಮಿಸ್ಟ್ರಿ ಅಂಡ್ ಎಂಜಿನಿಯರಿಂಗ್ ನಿಯತಕಾಲಿಕೆ'ಯಲ್ಲಿ ಈ ಸಂಶೋಧನೆಯನ್ನು ಪ್ರಕಟಿಸಿದ್ದಾರೆ. ಪರಿಸರವನ್ನು ನಾಶ ಮಾಡುತ್ತಿದ್ದ ಎಲೆಕ್ಟ್ರಾನಿಕ್ ತ್ಯಾಜ್ಯಕ್ಕೆ ಪರಿಹಾರವನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಈ ಹೊಸ ಶೋಧವನ್ನು ನಡೆಸಲಾಗಿದೆ ಎಂದು ವಿಜ್ಞಾನಿಗಳು ವ್ಯಾಖ್ಯಾನಿಸಿದ್ದಾರೆ.
ಇಂಪೀರಿಯಲ್ ಕಾಲೇಜ್ ಆಫ್ ಲಂಡನ್‌ನ ರಸಾಯನ ವಿಜ್ಞಾನ ವಿಭಾಗದ ಪ್ರಾಧ್ಯಾಪಕ ಜೇಮ್ಸ್ ವಿಲ್ಟನ್ ಎಲಿ ಅವರ ನೇತೃತ್ವದಲ್ಲಿ ನಡೆದಿರುವ ಈ ಸಂಶೋಧನೆಯನ್ನು ಈ ದಶಮಾನದ ಮಹತ್ವದ ಸಂಶೋಧನೆ ಎಂದೇ ವ್ಯಾಖ್ಯಾನಿಸಲಾಗಿದೆ. ಏಕೆಂದರೆ ಒಂದು ಅಂದಾಜಿನ ಪ್ರಕಾರ ಕೇವಲ 50 ವರ್ಷಗಳ ಒಳಗೆ ಪ್ರಪಂಚದ ಎಲ್ಲ ಚಿನ್ನದ ಅದಿರಿನ ನಿಕ್ಷೇಪಗಳು ಖಾಲಿಯಾಗಲಿವೆ. ಅಲ್ಲಿಂದ ಮುಂದಕ್ಕೆ ಚಿನ್ನವನ್ನು ಮರುಬಳಸಬೇಕೇ ಹೊರತು, ಉತ್ಪಾದಿಸಲಾಗದು. ಈ ಹೊಸ ಸಂಶೋಧನೆಯು ಹಾಲಿ ಕೇವಲ ವೈದ್ಯಕೀಯ ಚಿಕಿತ್ಸೆಗೆ ಬಳಕೆಯಾದರೂ ಭವಿಷ್ಯದಲ್ಲಿ ಚಿನ್ನದ ಮರುಬಳಕೆಯ ಹೊಸ ಸಾಧ್ಯತೆಗಳನ್ನು ತೆರೆಯಲಿದೆ ಎಂದು ವಿಶ್ಲೇಷಿಸಲಾಗಿದೆ.
'ನಮ್ಮ ಸಂಶೋಧನೆಯಿಂದ ಸದ್ಯಕ್ಕೆ ಆಭರಣಕ್ಕೆ ಬಳಸುವ ಚಿನ್ನವನ್ನು ತ್ಯಾಜ್ಯದಿಂದ ಸಂಸ್ಕರಿಸಿ ತೆಗೆಯಲಾಗುವುದಿಲ್ಲ. ಕೇವಲ ಅಣುಬೀಜದ (ಮಾಲೆಕ್ಯುಲರ್) ಮಟ್ಟದಲ್ಲಿ ಚಿನ್ನವನ್ನು ಹೊರತೆಗೆಯುತ್ತಿದ್ದೇವೆ. ಈ ಅಣುಬೀಜಗಳನ್ನು ನೋವುನಿವಾರಕ, ಊತವನ್ನು ಕಡಿಮೆ ಮಾಡುವ ಔಷಧಗಳ ಬಳಕೆಯಲ್ಲಿ ಅತಿ ದೊಡ್ಡ ಪ್ರಮಾಣದಲ್ಲಿ ಬಳಸಬಹುದಾಗಿದೆ. ಹಾಲಿ ಬಳಕೆಯಲ್ಲಿರುವ ಚಿನ್ನದ ಅದಿರಿನ ಮೇಲಿನ ಸಂಪೂರ್ಣ ಅವಲಂಬನೆಯನ್ನು ಇದರಿಂದ ತಪ್ಪಿಸಿಕೊಳ್ಳಬಹುದಾಗಿದೆ' ಎಂದು ಪ್ರೊ.ಜೇಮ್ಸ್ ವಿವರಿಸಿದ್ದಾರೆ.
ಔಷಧಗಳು ಪರಿಣಾಮಕಾರಿ ಕಾರ್ಯನಿರ್ವಹಿಸಬೇಕಾದರೆ ಕೆಲವು ಅಣುಬೀಜ ಮಟ್ಟದ ರಾಸಾಯನಿಕಗಳನ್ನು, ಲೋಹಗಳನ್ನು ಬಳಸಲಾಗುತ್ತದೆ. ಚಿನ್ನ, ಬೆಳ್ಳಿ ಮತ್ತು ತಾಮ್ರದಂತಹ ಲೋಹಗಳ ಬಳಕೆ ಹೆಚ್ಚು. ಔಷಧ ತಯಾರಿ ಕಂಪನಿಗಳು ಲೋಹಗಳನ್ನೇ ಕಚ್ಚಾವಸ್ತುವಾಗಿ ಬಳಸಿಕೊಂಡು ಔಷಧ ತಯಾರಿಸುತ್ತಿವೆ. ಇದೇ ಕಾರಣದಿಂದಾಗಿ ಈ ಔಷಧಗಳ ಬೆಲೆಯೂ ಹೆಚ್ಚು. ಈ ಸಂಶೋಧನೆಯು ಎಲೆಕ್ಟ್ರಾನಿಕ್ ತ್ಯಾಜ್ಯದಿಂದ ಚಿನ್ನವನ್ನು ಹೊರತೆಗೆಯುವ ಕಾರಣ, ದುಬಾರಿ ಚಿನ್ನವನ್ನು ಕೊಳ್ಳುವ ಅಗತ್ಯವೇ ಇರುವುದಿಲ್ಲ ಎನ್ನುತ್ತಾರೆ, ವಿಜ್ಞಾನಿಗಳು.
ಸಂಸ್ಕರಣೆಯ ಖರ್ಚೂ ಕಡಿಮೆ
ಎಲೆಕ್ಟ್ರಾನಿಕ್
ತ್ಯಾಜ್ಯಗಳಿಂದ ಲೋಹಸಂಸ್ಕರಣೆ ತಂತ್ರಜ್ಞಾನ ಇದೇ ಹೊಸತೇನಲ್ಲ. ಈ ಮುಂಚೆಯೂ ಹಲವು
ವಿಧಾನಗಳನ್ನು ಬಳಸಿ ಲೋಹಗಳನ್ನು ಹೊರತೆಗೆಯಲಾಗುತ್ತಿದೆ. ಜೊತೆಗೆ ತುಂಬಾ ದುಬಾರಿ.
ಹಾಗಾಗಿ, ಅದು ಲಾಭದಾಯಕವಲ್ಲ ಎಂದು ತ್ಯಾಜ್ಯವನ್ನು ಸಂಸ್ಕರಿಸದೇ ಬಿಸಾಡುವುದೇ ಹೆಚ್ಚು.
ಆದರೆ, ಹಾಲಿ ಸಂಶೋಧನೆಯು ಸಂಸ್ಕರಣೆಯ ಖರ್ಚನ್ನು ಶೇ 80ರಷ್ಟು ಕಡಿಮೆ ಮಾಡಲಿದೆ ಎಂದು
ವಿಜ್ಞಾನಿಗಳು ತಿಳಿಸಿದ್ದಾರೆ. ಜೊತೆಗೆ ಈ ಸಂಶೋಧನೆಯಿಂದ ಕೇವಲ ಚಿನ್ನ ಮಾತ್ರವೇ
ಅಲ್ಲದೇ, ಬೆಳ್ಳಿ, ತಾಮ್ರ ಹಾಗೂ ನಿಕಲ್ ಅಣುಬೀಜಗಳನ್ನೂ ಸಂಸ್ಕರಿಸಬಹುದಾಗಿದೆ.
ಅದೇ ಕಾರಣಕ್ಕೆ, ಈ ವಿಜ್ಞಾನಿಗಳು 'ಅರ್ಬನ್ ಮೈನಿಂಗ್' ಎನ್ನುವ ಹೊಸ ಹೆಸರನ್ನೇ ಇದಕ್ಕೆ ಇಟ್ಟಿದ್ದಾರೆ. ನಗರದೊಳಗೆ ಉತ್ಪಾದನೆಯಾಗುವ ಎಲೆಕ್ಟ್ರಾನಿಕ್ ತ್ಯಾಜ್ಯ ಇನ್ನು ಅಮೂಲ್ಯ ಲೋಹಗಳ ನಿಕ್ಷೇಪ. ಈ ಸಂಶೋಧನೆಯಿಂದ ಪರಿಸರವೂ ಸ್ವಚ್ಛವಾಗುತ್ತದೆ, ಜೊತೆಗೆ, ಲೋಹಗಳ ಮೇಲಿನ ಅವಲಂಬನೆಯೂ ತಪ್ಪುತ್ತದೆ. ಭವಿಷ್ಯದಲ್ಲಿ ಈ ಸಂಶೋಧನೆ ಮತ್ತಷ್ಟು ಸುಧಾರಿಸಿದ ಬಳಿಕ ಚಿನ್ನಾಭರಣಗಳ ತಯಾರಿಗೂ ಬಳಕೆಯಾಗಲಿದೆ ಎಂದು ಸಂಶೋಧಕ ಶಾನ್ ಮೆಕಾರ್ತಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಚಿನ್ನಕ್ಕಿಂತಲೂ ದುಬಾರಿಯಾದ ಪೆಲೆಡಿಯಂನಂತಹ ಲೋಹಗಳು ಸದ್ಯಕ್ಕೆ ವಾಹನಗಳಲ್ಲಿ ಕ್ಯಾಟಲಿಕ್ಟ್ ಕನ್ವರ್ಟರ್‌ಗಳಾಗಿ (ಹೊಗೆ ಕೊಳವೆಯಲ್ಲಿ) ಬಳಕೆಯಾಗುತ್ತಿವೆ. ಈ ಬಗೆಯ ಲೋಹಗಳನ್ನು ಮರು ಬಳಕೆ ಮಾಡಿಕೊಂಡರೆ ಉಳಿಯುವ ಹಣದ ಮೊತ್ತ ಬಹು ದೊಡ್ಡದು. ಜೊತೆಗೆ, ಈ ಲೋಹಗಳ ಅದಿರಿನ ಸಂಸ್ಕರಣೆ, ಉತ್ಪಾದನೆಯಲ್ಲಾಗುವ ಅತಿ ದೊಡ್ಡ ಪ್ರಮಾಣದಲ್ಲಿನ ಪರಿಸರ ಹಾನಿಯನ್ನು ತಪ್ಪಿಸಬಹುದು. ಇಂತಹ ಲೋಹಗಳನ್ನೂ ತ್ಯಾಜ್ಯದಿಂದ ಹೊರತೆಗೆದು ಮತ್ತೆ ವಾಹನಗಳಲ್ಲಿ ಬಳಸುವಂತೆ ಮಾಡುವ ನಿಟ್ಟಿನಲ್ಲೂ ಸಂಶೋಧನೆ ಮುಂದುವರೆದಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.