ನವದೆಹಲಿ: ಸೊಳ್ಳೆ ಓಡಿಸಲು ಬಳಸುವ ಕಾಯಿಲ್ ಹಚ್ಚಿ ಒಂದೇ ಕೋಣೆಯಲ್ಲಿ ಮಲಗಿದ್ದರು. ಕಾಯಿಲ್ ಹಾಸಿಗೆಗೆ ತಾಗಿ ಬೆಂಕಿ ಹತ್ತಿಕೊಂಡ ಪರಿಣಾಮ ಉಸಿರುಗಟ್ಟಿ ಹಸುಗೂಸು ಸೇರಿದಂತೆ ಆರು ಜನರು ಸಾವಿಗೀಡಾಗಿದ್ದಾರೆ. ಈ ಘಟನೆ ಈಶಾನ್ಯ ದೆಹಲಿಯ ಶಾಸ್ತ್ರಿ ಪಾರ್ಕ್‌ನ ಮಾಚಿ ಮಾರ್ಕೆಟ್‌ನ ಮಜರ್ ವಾಲಾ ರಸ್ತೆಯಲ್ಲಿರುವ ಮನೆಯೊಂದರಲ್ಲಿ ನಡೆದಿದೆ.
ಪೊಲೀಸರ ಪ್ರಕಾರ, ರಾತ್ರಿ ವೇಳೆ ಸೊಳ್ಳೆಗಳಿಂದ ಮುಕ್ತಿ ಪಡೆಯಲು ಹಚ್ಚಿದ್ದರು. ಒಂದೇ ಕೋಣೆಯಲ್ಲಿ ಮಲಗಿದ್ದರು. ಸೊಳ್ಳೆ ಬತ್ತಿಯು ಅಕಸ್ಮಾತ್ ಆಗಿ ಹಾಸಿಗೆಯ ಮೇಲೆ ಬಿದ್ದಿದೆ. ವಿಷಕಾರಿ ಹೊಗೆಯಿಂದಾಗಿ ಮನೆ ಜನರು ಪ್ರಜ್ಞೆ ಕಳೆದುಕೊಂಡು ಉಸಿರುಗಟ್ಟಿ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಇತರ ಮೂವರು ಗಾಯಗೊಂಡಿದ್ದಾರೆ.
ಸ್ಥಳಕ್ಕಾಗಮಿಸಿದ ಪೊಲೀಸರು ಒಂಬತ್ತು ಜನರನ್ನು ಜಗ್ ಪ್ರವೇಶ್ ಚಂದ್ರ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಇವರಲ್ಲಿ ನಾಲ್ವರು ಪುರುಷರು, ಓರ್ವ ಮಹಿಳೆ ಹಾಗೂ ಒಂದೂವರೆ ವರ್ಷದ ಮಗು ಮೃತಪಟ್ಟಿದೆ.ಈ ಸಂಬಂಧ ಹೆಚ್ಚಿನ ತನಿಖೆ ನಡೆಯುತ್ತಿದೆ. ಬೆಂಕಿಯ ಬಗ್ಗೆ ಮಾಹಿತಿ ಪಡೆದ ನಂತರ ಮೂರು ವಾಹನಗಳು ಸ್ಥಳಕ್ಕೆ ಧಾವಿಸಿದವು ಎಂದು ಅಗ್ನಿಶಾಮಕ ಇಲಾಖೆ ತಿಳಿಸಿದೆ.