ನವದೆಹಲಿ:ದೊಡ್ಡ ಹೇಳಿಕೆಗಳ ಹೊರತಾಗಿಯೂ ಸಮಾಜದಲ್ಲಿ ಬಹಳಷ್ಟು ಮಂದಿ ಇನ್ನೂ ಬಡತನ (poverty) ರೇಖೆಯಿಂದ ಕೆಳಗೆ ವಾಸಿಸುತ್ತಿದ್ದಾರೆ ಎಂದು ಸುಪ್ರೀಂ ಕೋರ್ಟಿನ (Supreme Court) ನ್ಯಾಯಮೂರ್ತಿಗಳಾದ ಕೆ ಎಂ ಜೋಸೆಫ್ ಮತ್ತು ಬಿ ವಿ ನಾಗರತ್ನ ಅವರನ್ನೊಳಗೊಂಡ ಪೀಠ ಸೋಮವಾರ ವಿಚಾರಣೆಯೊಂದರ ವೇಳೆ ಹೇಳಿದೆ.
ಕೈಗಾರಿಕೆಗಳ ವ್ಯಾಜ್ಯ ಕಾಯಿದೆ 1947 ಗೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ವಿಶೇಷ ಮೇಲ್ನನವಿ ಅರ್ಜಿಯ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಮೇಲಿನಂತೆ ಹೇಳಿದೆ.
ಪ್ರಕರಣವನ್ನು ವಿಚಾರಣೆಗೆ ಹಲವು ಬಾರಿ ನಿಗದಿಪಡಿಸಲಾಗಿದ್ದರೂ ಅರ್ಜಿದಾರರು ಹಲವಾರು ಬಾರಿ ಮುಂದೂಡಿಕೆಗಳನ್ನು ಆಗ್ರಹಿಸಿರುವ ಕುರಿತು ಪ್ರತಿವಾದಿ ತನ್ನ ಅಸಮಾಧಾನ ಸೂಚಿಸಿದ್ದರು. ಖುದ್ದಾಗಿ ಹಾಜರಾದ ಆತ ತಾನು ಹಲವಾರು ತಿಂಗಳುಗಳಿಂದ ನಿರುದ್ಯೋಗಿಯಾಗಿದ್ದು ಪತ್ನಿಯ ಆದಾಯದಿಂದ ಕುಟುಂಬ ಹೇಗೋ ಸಾಗುತ್ತಿದೆ ಎಂದು ತಿಳಿಸಿದ್ದ.
ದೇಶದಲ್ಲಿ ಬಹಳಷ್ಟು ನಿರುದ್ಯೋಗವಿದೆ (Unemployment). ಪ್ರತಿವಾದಿ ಹೇಳಿದ್ದಕ್ಕಿಂತಲೂ ಕೆಟ್ಟ ಪರಿಸ್ಥಿತಿಯಲ್ಲಿರುವವರು ಹಲವರಿದ್ದಾರೆ ಎಂದು ನ್ಯಾಯಾಲಯ ಹೇಳಿತು.
"ನೀವು ಸೀನಿಯರ್ ಮ್ಯಾನೇಜರ್ ಆಗಿದ್ದವರು. ಆದರೆ ನಾವು ಕಾರ್ಮಿಕರ ಬಗ್ಗೆ ಹೇಳುತ್ತಿದ್ದೇವೆ. ಈಗ ಅವರು ರೂ. 6,000 ಕ್ಕೂ ಕೆಲಸ ಮಾಡಲು ಸಿದ್ಧರಿದ್ದಾರೆ. ಅಂಗನವಾಡಿ ಕಾರ್ಯಕರ್ತೆಯರ ಕುರಿತೂ ಹೇಳಬಲ್ಲೆವು..." ಎಂದು ನ್ಯಾಯಪೀಠ ಹೇಳಿದೆ.