ಕಾಸರಗೋಡು: ಕಂದಾಯ ಇಲಾಖೆ ಇತರ ಎಲ್ಲ ಇಲಾಖೆಗಳಿಗೆ ಮಾತೃ ಸ್ಥಾನದಲ್ಲಿದ್ದು, ಸೇವೆಯೇ ಇಲಾಖೆಯ ಹೆಗ್ಗುರುತಾಗಿದೆ ಎಂದು ಕಂದಾಯ ಮತ್ತು ವಸತಿ ಖಾತೆ ಸಚಿವ ಕೆ. ರಾಜನ್ ತಿಳಿಸಿದ್ದಾರೆ. ಅವರು ಕಾಞಂಗಾಡು ತುರ್ತಿ ಸ್ಮಾರ್ಟ್ ವಿಲೇಜ್ ಕಚೇರಿ ಕಟ್ಟಡ ಉದ್ಘಾಟಿಸಿ ಮಾತನಾಡಿದರು.
ಇಲಾಖೆಯ ಕಾರ್ಯನಿರ್ವಹಣೆಯನ್ನು ವೇಗವಾಗಿ ಮತ್ತು ಹೆಚ್ಚು ಪಾರದರ್ಶಕವಾಗಿಸಲು ಸರ್ಕಾರ ಡಿಜಿಟಲ್ ಮತ್ತು ಸ್ಮಾರ್ಟ್ ಆಗುತ್ತಿದೆ. ಭೂ ರಹಿತರಿಗೆಲ್ಲರಿಗೂ ಭೂಮಿ ನೀಡುವುದು ಸರ್ಕಾರದ ಗುರಿಯಾಗಿದೆ. ಅಕ್ರಮ ಭೂಗಳ್ಳರಿಂದ ಜಾಗವನ್ನು ವಶಪಡಿಸಿ, ಇದನ್ನು ಅರ್ಹರಿಗೆ ವಿತರಿಸಲಾಗುವುದು. ಈ ಕಾರ್ಯ ಚುರುಕುಗೊಳಿಸಲು ಗ್ರಾಮ ಕಚೇರಿಗಳು ಕಾರ್ಯನಿರ್ವಹಿಸಬೇಕು ಎಂದು ಸಚಿವರು ಹೇಳಿದರು.
ಶಾಸಕ ಎಂ.ರಾಜಗೋಪಾಲನ್ ಅಧ್ಯಕ್ಷತೆ ವಹಿಸಿದ್ದರು. ಎಡಿಎಂ ಎ.ಕೆ.ರಾಮೇಂದ್ರನ್, ಹೊಸದುರ್ಗ ತಹಸೀಲ್ದಾರ್ ಎನ್.ಮಣಿರಾಜ್, ಬ್ಲಾಕ್ ಪಂಚಾಯಿತಿ ಅಧ್ಯಕ್ಷ ಮಾಧವನ್ ಮಣಿಯರ, ಚೆರುವತ್ತೂರ್ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸಿ.ವಿ.ಪ್ರಮೀಳಾ, ಜಿಲ್ಲಾ ಪಂಚಾಯಿತಿ ಸದಸ್ಯ ಸಿ.ಜೆ.ಸಜಿತ್, ಬ್ಲಾಕ್ ಪಂಚಾಯಿತಿ ಸದಸ್ಯೆ ಕೆ.ವಲ್ಲಿ, ಗ್ರಾ.ಪಂ.ಸದಸ್ಯ ಸಿ.ಕೆ.ರಹಮತ್ ಟೀಚರ್, ರಾಜಕೀಯ ಪಕ್ಷಗಳ ಪ್ರತಿನಿಧಿಗಳು ªಉಪಸ್ಥಿತರಿದ್ದರು. ಅಪರ ಜಿಲ್ಲಾಧಿಕಾರಿ ಸುಫ್ಯಾನ್ ಅಹ್ಮದ್ ಸ್ವಾಗತಿಸಿದರು. ಗ್ರಾಮಾಧಿಕಾರಿ ಕೆ. ಸುರೇಶ್ ವಂದಿಸಿದರು.
ಜಿಲ್ಲಾಧಿಕಾರಿಗೆ ಪ್ರಶಂಸೆ:
ರಾಜ್ಯ ಸರಕಾರ ತನ್ನ ಎರಡನೇ ವರ್ಷಾಚರಣೆಯ ಸಂದರ್ಭದಲ್ಲಿ 50,000 ಕುಟುಂಬಗಳಿಗೆ ಭೂಮಿ ಮಂಜೂರು ಮಾಡಲು ಸಿದ್ಧತೆ ನಡೆಸಿದ್ದು, ಕಾಸರಗೋಡು ದೀರ್ಘಕಾಲದ ಸಮಸ್ಯೆಗಳನ್ನು ಪರಿಹರಿಸಿ ಮೇ 20 ರೊಳಗೆ 1,650 ಕುಟುಂಬಗಳನ್ನು ಭೂಮಿಯ ಫಲಾನುಭವಿಗಳನ್ನಾಗಿ ಮಾಡಲು ಸಾಧ್ಯವಾಗಲಿದೆ. ಇದಕ್ಕೆ ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರಚಂದ್ ಕಾರಣಕರ್ತರಾಗಿದ್ದು, ಇದು ಜಿಲ್ಲೆಯ ಜನತೆಯ ಸೌಭಾಗ್ಯವಾಗಿದೆ. ಕಡಿಮೆ ಮಾತಿನೊಂದಿಗೆ ಕಡತಗಳ ಕಡೆಗೆ ಹೆಚ್ಚಿನ ಗಮನ ನೀಡುವ ಮೂಲಕ ಸಮಸ್ಯೆಗಳ ಪರಿಹಾರಕ್ಕೆ ಆದ್ಯತೆ ನೀಡುವ ಜಿಲ್ಲಾಧಿಕಾರಿ ಕಾರ್ಯ ಶ್ಲಾಘನೀಯ ಎಂದು ಸಚಿವರು ತಿಳಿಸಿದರು.
ಕಂದಾಯ ಇಲಾಖೆಗೆ ಸೇವೆಯೇ ಹೆಗ್ಗುರುತು: ತುರ್ತಿ ಸ್ಮಾರ್ಟ್ ವಿಲೇಜ್ ಕಚೇರಿ ಕಟ್ಟಡ ಉದ್ಘಾಟಿಸಿ ಸಚಿವ ಕೆ. ರಾಜನ್ ಅಭಿಪ್ರಾಯ
0
ಮಾರ್ಚ್ 31, 2023
Tags