ಕಣ್ಣೂರು: ಆಸ್ಪತ್ರೆಗೆ ಹೋಗುವಾಗ ಇದ್ದಕ್ಕಿದ್ದಂತೆ ಕಾರು ಹೊತ್ತಿ ಉರಿದು ಗಂಡ ಮತ್ತು ಗರ್ಭಿಣಿ ಪತ್ನಿ ಸಜೀವ ದಹನವಾದ ಘಟನೆ ಕೇರಳದ ಕಣ್ಣೂರಿನಲ್ಲಿ ಫೆ.2 ರಂದು ನಡೆದಿತ್ತು. ಈ ಘಟನೆಗೆ ಇಡೀ ರಾಜ್ಯವೇ ಕಂಬನಿ ಮಿಡಿದಿತ್ತು. ಆದರೆ, ಅವಘಡಕ್ಕೆ ಕಾರಣ ಏನೆಂಬುದು ಕೇರಳ ಸಾರಿಗೆ ಇಲಾಖೆಗೆ ಬಹುದೊಡ್ಡ ಪ್ರಶ್ನೆಯಾಗಿ ಉಳಿದಿತ್ತು.
ಇದೀಗ ಆ ಪ್ರಶ್ನೆಗೆ ವಿಧಿವಿಜ್ಞಾನ ವರದಿಯಲ್ಲಿ ಉತ್ತರ ಸಿಕ್ಕಿದೆ.
ಕಾರಿನ ಒಳಗಡೆ ಇದ್ದ ಬಾಟಲ್ನಲ್ಲಿ ಪೆಟ್ರೋಲ್ ತುಂಬಿಸಿ ಇಟ್ಟಿದ್ದೇ ಕಾರಿಗೆ ಬೆಂಕಿ ತಗುಲಲು ಕಾರಣ ಎಂದು ವಿಧಿವಿಜ್ಞಾನ ವರದಿಯಲ್ಲಿ ಖಚಿತವಾಗಿದೆ. ಈ ವರದಿಯನ್ನು ಥಲಿಪರಂಬುವಿನ ಸಬ್ ಜ್ಯುಡಿಶೀಯಲ್ ಕೋರ್ಟ್ಗೆ ಸಲ್ಲಿಸಲಾಗಿದೆ. ಸುಮಾರು ಒಂದು ತಿಂಗಳ ತನಿಖೆಗೆ ಬಳಿಕ ವರದಿಯನ್ನು ಸಲ್ಲಿಸಲಾಗಿದೆ.
ಘಟನೆ ಹಿನ್ನೆಲೆ ಏನು?
ಫೆ.2ರಂದು ಬೆಳಗ್ಗೆ ಕಣ್ಣೂರು
ಮೂಲದ ರೀಶಾ (26) ಮತ್ತು ಪತಿ ಪ್ರಿಜಿತ್ (35) ಇಬ್ಬರು ಆಸ್ಪತ್ರೆಗೆ
ತೆರಳುತ್ತಿದ್ದರು. ಗರ್ಭಿಣಿ ರೀಶಾಗೆ ಹೊಟ್ಟೆ ನೋವು ಕಾಣಿಸಿಕೊಂಡಿದ್ದರಿಂದ ಆಸ್ಪತ್ರೆಗೆ
ಕರೆದೊಯ್ಯಲಾಗುತ್ತಿತ್ತು. 2020 ಮಾರುತಿ ಎಸ್- ಪ್ರೆಸ್ಸೋ ಕಾರಿನಲ್ಲಿ ಒಟ್ಟು 6 ಮಂದಿ
ತೆರಳುತ್ತಿದ್ದರು. ಒಂದು ಮಗು ಸೇರಿದಂತೆ ನಾಲ್ವರು ಹಿಂದಿನ ಸೀಟಿನಲ್ಲಿ ಕುಳಿತಿದ್ದರು.
ಕಾರಿನಲ್ಲಿ ಇದ್ದಕ್ಕಿದಂತೆ ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ಹಿಂದೆ
ಕುಳಿತ್ತಿದ್ದವರು ಎಸ್ಕೇಪ್ ಆದರು. ಆದರೆ, ಮುಂದೆ ಕುಳಿತಿದ್ದ ದಂಪತಿಯ ಕೈಯಿಂದ ಕಾರಿನ
ಬಾಗಿಲು ಸಾಧ್ಯವಾಗದೇ ಅಲ್ಲಿಯೇ ಸಿಲುಕಿದರು.
ಅಗ್ನಿಶಾಮಕ ಸಿಬ್ಬಂದಿ ಮತ್ತು ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಬರುವಷ್ಟರಲ್ಲಿ ರೀಶಾ ಮತ್ತು ಪ್ರಿಜಿತ್ ಮೃತಪಟ್ಟಿದ್ದರು. ಸ್ಥಳದಲ್ಲಿದ್ದ ಜನರು ಇಬ್ಬರನ್ನು ಕಾಪಾಡಲು ಯತ್ನಿಸಿದಾದರೂ ಅದು ಸಾಧ್ಯವಾಗಲಿಲ್ಲ.
ಘಟನೆ ಬಳಿಕ ಅದಕ್ಕೆ ಕಾರಣ ಏನು ಎಂಬುದೇ ಕೇರಳ ಸಾರಿಗೆ ಇಲಾಖೆಗೆ ಭಾರೀ ಸವಾಲಾಗಿತ್ತು. ಮೋಟಾರು ವಾಹನ ಇಲಾಖೆ, ವಿಧಿವಿಜ್ಞಾನ ವಿಭಾಗ ಹಾಗೂ ಪೊಲೀಸರು ನಡೆಸಿದ ತಪಾಸಣೆಯಲ್ಲಿ ವಾಹನದ ಇಂಧನ ಲೈನ್‌ನಲ್ಲಿ ಯಾವುದೇ ದೋಷ ಕಂಡುಬಂದಿರಲಿಲ್ಲ. ಇದಕ್ಕೆ ಉತ್ತರ ಹುಡುಕುವ ಪ್ರಯತ್ನ ನಡೆಯುತ್ತಲೇ ಇತ್ತು. ಬಹುಶಃ ಶಾರ್ಟ್ ಸರ್ಕ್ಯೂಟ್ನಿಂದ ಅವಘಡ ಸಂಭವಿಸಿರಬಹುದೆಂದು ಆರಂಭದಲ್ಲಿ ಅಂದಾಜಿಸಲಾಗಿತ್ತು. ಆದಾಗ್ಯೂ, ಕಾರಿನಲ್ಲಿದ್ದ ಕೆಲವು ವಸ್ತುಗಳಿಂದ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಸಾರಿಗೆ ಇಲಾಖೆ ಅಧಿಕಾರಿ ಪಿವಿ ಬಿಜು ಊಹಿಸಿದ್ದರು.
ಕಾರನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ ಎರಡು ಪ್ಲಾಸ್ಟಿಕ್ ಬಾಟಲಿಗಳು ಪತ್ತೆಯಾಗಿದ್ದವು. ಬಾಟಲ್‌ಗಳಲ್ಲಿ ಏನಾದರೂ ದ್ರವ ಇತ್ತೇ ಎಂಬುದನ್ನು ತಿಳಿಯಲು ಅವುಗಳನ್ನು ಕೆಮಿಕಲ್ ಟೆಸ್ಟ್ಗೆ ಕಳುಹಿಸಲಾಗಿತ್ತು. ಇದೀಗ ಬಾಟಲಿಗಳಲ್ಲಿ ಪೆಟ್ರೋಲ್ ಇದ್ದಿದ್ದು ಫಾರೆನ್ಸಿಕ್ ಟೆಸ್ಟ್ನಲ್ಲಿ ಪತ್ತೆಯಾಗಿದ್ದು, ಇದರಿಂದಲೇ ಅವಘಡ ಸಂಭವಿಸಿದೆ ಎಂದು ವರದಿ ಹೇಳಿದೆ. ಆದರೆ, ಮೃತ ರೀಶಾಳ ತಂದೆ ವಿಶ್ವನಾಥನ್ ಕಾರಿನಲ್ಲಿ ಎರಡು ಬಾಟಲ್‌ಗಳಲ್ಲಿ ಇಟ್ಟಿದ್ದ ದ್ರವದಿಂದ ಅಪಘಾತ ಸಂಭವಿಸಿದೆ ಎಂಬ ವದಂತಿಯನ್ನು ಈ ಹಿಂದೆಯೇ ಅಲ್ಲಗಳೆದಿದ್ದರು.