ಎರ್ನಾಕುಲಂ :ತೃತೀಯಲಿಂಗಿಗಳು ಇತ್ತೀಚಿಗೆ ಎಲ್ಲರಂತೆ ಸಹಜ ಜೀವನ ನಡೆಸುತ್ತಾ ಸಮಾಜದಲ್ಲಿ ಒಬ್ಬರಾಗಿ ಬದುಕುತ್ತಿದ್ದಾರೆ. ಇದೀಗ ಕೇರಳದಲ್ಲಿ ಮೊದಲ ಬಾರಿಗೆ ತೃತೀಯಲಿಂಗಿ ವಕೀಲೆಯಾಗಿದ್ದಾರೆ.
ತೃತೀಯಲಿಂಗಿಯಾಗಿರುವ ಪದ್ಮ ಲಕ್ಷ್ಮೀ ಎರ್ನಾಕುಲಂನ ಸರ್ಕಾರಿ ಕಾನೂನು ಕಾಲೇಜಿನಲ್ಲಿ ವ್ಯಾಸಾಂಗ ಮಾಡಿದ್ದಾರೆ.
ಪದ್ಮ ಲಕ್ಷ್ಮೀ ಸೇರಿದಂತೆ ಒಟ್ಟು 1,500ಕ್ಕೂ ಅಧಿಕ ವಕೀಲರಿಗೆ ಭಾನುವಾರದಂದು ಬಾರ್ ಕೌನ್ಸಿಲ್ ಪ್ರಮಾಣ ಪತ್ರ ಕೊಟ್ಟಿದೆ. ಪದ್ಮ ಲಕ್ಷ್ಮೀ ಅವರು ಬಾರ್ ಕೌನ್ಸಿಲ್‌ನಲ್ಲಿ ವಕೀಲೆಯಾಗಿ ನೋಂದಣಿ ಮಾಡಿಕೊಂಡಿದ್ದಾರೆ.
ಪದ್ಮಾ ಅವರ ಸಾಧನೆ ವಿಚಾರದಲ್ಲಿ ರಾಜ್ಯದ ಕಾರ್ಖಾನೆ ಸಚಿವಾಗಿರುವ ಪಿ. ರಾಜೀವ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. 'ಜೀವನದಲ್ಲಿ ಎದುರಾದ ಎಲ್ಲ ಅಡೆತಡೆಗಳನ್ನೂ ಗೆದ್ದು ರಾಜ್ಯದ ಮೊದಲನೇ ತೃತೀಯ ಲಿಂಗಿ ವಕೀಲರಾದ ಪದ್ಮ ಲಕ್ಷ್ಮೀ ಅವರಿಗೆ ಅಭಿನಂದನೆಗಳು. ಮೊದಲಿಗರಾಗುವುದು ಯಾವಾಗಲೂ ಉತ್ತಮ ಸಾಧನೆಯಾಗಿದೆ. ಗುರಿಯ ಹಾದಿಯಲ್ಲಿ ಅಡೆತಡೆಗಳು ಇದ್ದೇ ಇರುತ್ತವೆ.ಪದ್ಮ ಇಂದು ಇತಿಹಾಸದಲ್ಲಿ ತನ್ನ ಹೆಸರು ಬರೆದಿದ್ದಾರೆ. ಅವರ ಈ ಸಾಧನೆ ಇನ್ನಷ್ಟು ತೃತೀಯ ಲಿಂಗಿಗಳಿಗೆ ಸಾಧನೆ ಮಾಡುವುದಕ್ಕೆ ಸ್ಫೂರ್ತಿಯಾಗಲಿದೆ' ಎಂದು ಸಚಿವರು ಬರೆದುಕೊಂಡಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ತೃತೀಯಲಿಂಗಿಯಾಗಿರುವ ಪದ್ಮ ಲಕ್ಷ್ಮೀ ಸಾಧನೆ ಬಗ್ಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ಹಿಂದೆ ಭಾರತದ ಮೊದಲ ತೃತೀಯ ಲಿಂಗ ನ್ಯಾಯಾಧೀಶರಾಗಿ ಜೋಯಿತಾ ಮೊಂಡಲ್ ಅವರು ನೇಮಕಗೊಂಡಿದ್ದರು.