ನವದೆಹಲಿ :ದೊಡ್ಡ ತಂತ್ರಜ್ಞಾನ ಸಂಸ್ಥೆಗಳಿಂದ ಬಳಕೆದಾರ ಡೇಟಾ ಕುರಿತು ದಕ್ಷಿಣ ಏಷ್ಯಾ ದೇಶಗಳ (South Asian countries) ಪೈಕಿ ಭಾರತ (India) ಗರಿಷ್ಠ ವಿನಂತಿಗಳನ್ನು ಮಾಡಿದೆ ಎಂದು ನೆದರ್‌ಲ್ಯಾಂಡ್ಸ್ ಮೂಲದ ಸರ್ಫ್‌ಶಾರ್ಕ್ ಎಂಬ ವರ್ಚುವಲ್ ಪ್ರೈವೇಟ್ ನೆಟ್‌ವರ್ಕ್ ಸೇವೆ ಬಿಡುಗಡೆಗೊಳಿಸಿದ ವರದಿ ತಿಳಿಸಿದೆ.
ತಂತ್ರಜ್ಞಾನ ಸಂಸ್ಥೆಗಳಾದ ಆಯಪಲ್, ಮೆಟಾ, ಗೂಗಲ್ ಮತ್ತು ಮೈಕ್ರೋಸಾಫ್ಟ್ ಪ್ರಕಟಿಸುವ ಪಾರದರ್ಶಕತೆ ವರದಿಗಳ ಆಧಾರದಲ್ಲಿ ಈ ವರದಿ ಹೊರತರಲಾಗಿದೆ.
ಸರ್ಫ್‌ಶಾರ್ಕ್ ವರದಿ ಪ್ರಕಾರ ಭಾರತ ಜಗತ್ತಿನಲ್ಲಿ ಈ ಪಟ್ಟಿಯಲ್ಲಿ 36ನೇ ಸ್ಥಾನದಲ್ಲಿದೆ ಹಾಗೂ 2013 ಹಾಗೂ 2021 ನಡುವೆ ತಲಾ 1 ಲಕ್ಷ ಜನರ ಖಾತೆಗಳಲ್ಲಿ ಸರಾಸರಿ 58.69 ಖಾತೆಗಳ ಮಾಹಿತಿ ಕೋರಿದೆ. ಈ ಅವಧಿಯಲ್ಲಿ ಭಾರತದ ಪ್ರಾಧಿಕಾರಗಳು ಸುಮಾರು 8,23,333 ಖಾತೆಗಳಿಗೆ ಸಂಬಂಧಿಸಿದ ಮಾಹಿತಿ ಕೋರಿವೆ ಎಂದು ವರದಿ ಹೇಳಿದೆ
ದಕ್ಷಿಣ ಏಷ್ಯಾ ದೇಶಗಳ ಪೈಕಿ ಭಾರತ ಮೊದಲ ಸ್ಥಾನದಲ್ಲಿದ್ದರೆ, ಎರಡನೇ ಸ್ಥಾನದಲ್ಲಿ ನೇಪಾಳವಿದೆ. ಜಾಗತಿಕ ಪಟ್ಟಿಯಲ್ಲಿ ನೇಪಾಳ 59 ನೇ ಸ್ಥಾನದಲ್ಲಿದೆ.
ಪಾಕಿಸ್ತಾನ ಈ ಪಟ್ಟಿಯಲ್ಲಿ 60ನೇ ಸ್ಥಾನದಲ್ಲಿದ್ದು ತಲಾ 1 ಲಕ್ಷ ಖಾತೆಗಳಲ್ಲಿ 11.09 ಖಾತೆಗೆಳ ಮಾಹಿತಿಯನ್ನು ಕೋರಲಾಗಿತ್ತು. ಬಾಂಗ್ಲಾದೇಶ ಜಾಗತಿಕವಾಗಿ 76ನೇ ಸ್ಥಾನದಲ್ಲಿದೆ.
ಅಮೆರಿಕ ಮೊದಲ ಸ್ಥಾನದಲ್ಲಿದ್ದು ತಲಾ 1 ಲಕ್ಷ ಖಾತೆಗಳ ಪೈಕಿ 728.41 ಖಾತೆಗಳ ಮಾಹಿತಿಯನ್ನು ಅಮೆರಿಕ ಕೋರಿದ್ದರೆ ನಂತರದ ಸ್ಥಾನದಲ್ಲಿ ಜರ್ಮನಿ ಮತ್ತು ಸಿಂಗಾಪುರ ಇವೆ. ಚೀನಾ 65ನೇ ಸ್ಥಾನದಲ್ಲಿದ್ದು ಅಲ್ಲಿನ ಸರಕಾರಿ ಏಜನ್ಸಿಗಳು ತಲಾ 1 ಲಕ್ಷ ಜನರ ಪೈಕಿ 6.68 ಖಾತೆ ಮಾಹಿತಿ ಕೇಳಿವೆ.