ಶ್ರೀನಗರ: ಕರ್ನಾಟಕದ ಶೃಂಗೇರಿಯಲ್ಲಿ ಪಂಚಲೋಹದಲ್ಲಿ ಮಾಡಲಾದ ಶಾರದಾ ದೇವಿಯ ವಿಗ್ರಹವನ್ನು ಜಮ್ಮು-ಕಾಶ್ಮೀರದ ಕುಪ್ವಾರ ಜಿಲ್ಲೆ ತೀತ್ವಾಲ್‌ನಲ್ಲಿರುವ ಶಾರದಾ ಮಂದಿರದಲ್ಲಿ (Mata Sharda Mandir) ಪ್ರತಿಷ್ಠಾಪನೆ ಮಾಡಲಾಗಿದೆ.
1948ರಲ್ಲಿ ಪಾಕಿಸ್ತಾನದ ಮೂಲಭೂತವಾದಿಗಳಿಂದ ಸಂಪೂರ್ಣವಾಗಿ ಹಾನಿಗೊಳಗಾಗಿದ್ದ ದೇವಾಲಯವನ್ನು ಪುನರ್ ನಿರ್ಮಾಣ ಮಾಡಲಾಗಿದೆ. ಇದನ್ನು ವರ್ಚ್ಯುವಲ್ ವೇದಿಕೆ ಮೂಲಕ ಲೋಕಾರ್ಪಣೆಗೊಳಿಸಿದ ಬಳಿಕ ಮಾತನಾಡಿದ ಅಮಿತ್ ಶಾ, 'ಜಮ್ಮು-ಕಾಶ್ಮೀರದಲ್ಲಿ 370ನೇ ವಿಧಿ ರದ್ದುಗೊಳಿಸಿದ ಬಳಿಕ ಕಣಿವೆಯ ಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸಲಾಗುತ್ತಿದೆ. ಇದರ ಭಾಗವಾಗಿಯೇ ಮಾತಾ ಶಾರದಾ ದೇವಿಯ ದೇವಾಲಯವನ್ನು ನಿರ್ಮಿಸಲಾಗಿದೆ. ಮುಂದಿನ ದಿನಗಳಲ್ಲಿ ನಾನು ಯಾವಾಗ ಕಾಶ್ಮೀರಕ್ಕೆ ಭೇಟಿ ನೀಡಿದರೂ, ಶಾರದಾ ದೇವಾಲಯಕ್ಕೆ ಭೇಟಿ ನೀಡಿ, ಆಶೀರ್ವಾದ ಪಡೆಯುತ್ತೇನೆ' ಎಂದು ಹೇಳಿದರು.
ಕರ್ನಾಟಕದ ಗ್ರಾನೈಟ್ ಬಳಕೆ
ಮಾತಾ ಶಾರದಾ ದೇವಿಯ ದೇವಾಲಯವನ್ನು ಕರ್ನಾಟಕದ ಬಿಡದಿ ಗ್ರಾನೈಟ್‌ಗಳನ್ನು ಬಳಸಿ ನಿರ್ಮಿಸಲಾಗಿದೆ. ಈ ದೇಗುಲ ನಿರ್ಮಿಸಿದವರು ಕರ್ನಾಟಕದ ಕಾರ್ಮಿಕರು ಎಂಬುದು ಮತ್ತೊಂದು ವಿಶೇಷ. ಕರ್ನಾಟಕದಿಂದ ಸಾಗಿಸಲಾಗಿರುವ ಗ್ರಾನೈಟ್ ಕಲ್ಲುಗಳನ್ನು ಬಳಸಿಯೇ ಈ ದೇಗುಲದ ಗರ್ಭಗುಡಿ ನಿರ್ಮಿಸಲಾಗಿದೆ.
ಹಾಗೆಯೇ, ಪ್ರತಿಷ್ಠಾಪನೆಗೊಂಡಿರುವ ಶ್ರೀ ಶಾರದಾಂಬೆಯ ವಿಗ್ರಹವನ್ನು ಶೃಂಗೇರಿಯ ಶ್ರೀ ಶಾರದಾ ಪೀಠವೇ ಸಿದ್ಧಪಡಿಸಿದೆ. ಈ ವಿಗ್ರಹವು ಶೃಂಗೇರಿಯ ಶಾರದಾಂಬೆಯ ವಿಗ್ರಹವನ್ನೇ ಹೋಲಲಿದೆ. ದೇಗುಲದ ನೀಲಿ ನಕ್ಷೆ ಮತ್ತು ಮಾದರಿಯನ್ನು ಶೃಂಗೇರಿಯ ಶ್ರೀಗಳೇ ಅಂತಿಮಗೊಳಿಸಿದ್ದಾರೆ. ಅವರ ಮಾರ್ಗದರ್ಶನ ಪಡೆದೇ ಈ ದೇಗುಲವನ್ನು ನಿರ್ಮಿಸಲಾಗಿದೆ.
ಅಮಿತ್ ಶಾ ಅವರು ಭಾಷಣದ ವೇಳೆ ಹಲವು ವಿಷಯಗಳನ್ನು ಸ್ಮರಿಸಿದರು. 'ಆದಿ ಶಂಕರರು ತಾಯಿ ಶಾರದೆ ಕುರಿತು ಹಲವು ಸ್ತುತಿಗಳನ್ನು ರಚಿಸಿದ್ದಾರೆ. ಹಾಗೆಯೇ, ಗಡಿಯಾಚೆಗಿನ ಶಾರದಾ ಪೀಠಕ್ಕೆ ವಾರ್ಷಿಕ ತೀರ್ಥಯಾತ್ರೆ ಆಯೋಜನೆ ಕುರಿತು ಕೂಡ ಪರಿಶೀಲನೆ ನಡೆಸಲಾಗುತ್ತದೆ. ಕರ್ತಾರ್‌ಪುರ ಕಾರಿಡಾರ್ ರೀತಿ, ಗಡಿಯಾಚೆಗಿನ ಶಾರದೆಯ ದರ್ಶನಕ್ಕೂ ವ್ಯವಸ್ಥೆ ಕುರಿತು ಚಿಂತನೆ ನಡೆಯುತ್ತಿದೆ' ಎಂದು ಮಾಹಿತಿ ನೀಡಿದರು. ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಕೂಡ ದೇವಾಲಯ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗಿಯಾದರು.