HEALTH TIPS

ಐಎಸ್‌ಐ ಜೊತೆ ಅಮೃತ್‌ಪಾಲ್‌ ಒಡನಾಟ: ವರದಿ

 

                ಚಂಡೀಗಢ: 'ಸಿಖ್‌ ಮೂಲಭೂತವಾದಿ ಧರ್ಮ ಪ್ರಚಾರಕ ಅಮೃತ್‌ಪಾಲ್‌ ಸಿಂಗ್, ಸಿಖ್ಖರಿಗೆ ಪ್ರತ್ಯೇಕ ರಾಷ್ಟ್ರ ದೊರಕಿಸಿಕೊಡಬೇಕೆಂಬ ಗುರಿ ಹೊಂದಿದ್ದ. ಇದಕ್ಕಾಗಿ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಹಾಗೂ ಡ್ರಗ್‌ ಪೆಡ್ಲರ್‌ಗಳ ಜೊತೆ ನಿಕಟ ಸಂಪರ್ಕ ಹೊಂದಿದ್ದ' ಎಂದು ಅಧಿಕಾರಿಗಳು ಸೋಮವಾರ ಹೇಳಿದ್ದಾರೆ.

                     'ಖಾಲಿಸ್ತಾನ ಪರವಾಗಿ ಸಹಾನುಭೂತಿ ಹೊಂದಿದ್ದ ಅಮೃತ್‌ಪಾಲ್‌ಗೆ ಐಎಸ್‌ಐ ಶಸ್ತ್ರಾಸ್ತ್ರ, ಮದ್ದುಗುಂಡುಗಳು ಹಾಗೂ ಇತರೆ ನೆರವನ್ನು ಒದಗಿಸುತ್ತಿತ್ತು. ಡ್ರಗ್‌ ಪೆಡ್ಲರ್‌ಗಳು ಆತನಿಗೆ ಹಣಕಾಸಿನ ಸಹಾಯ ಮಾಡುತ್ತಿದ್ದರು' ಎಂದು ಮಾಹಿತಿ ನೀಡಿದ್ದಾರೆ.

                     'ಡ್ರಗ್‌ ಪೆಡ್ಲರ್‌ ರಾವೆಲ್‌ ಸಿಂಗ್‌ ಎಂಬಾತ ಅಮೃತ್‌ಪಾಲ್‌ಗೆ ಮರ್ಸಿಡೀಸ್‌ ಎಸ್‌ಯುವಿ ಕಾರು ಉಡುಗೊರೆಯಾಗಿ ನೀಡಿದ್ದ. ಪೊಲೀಸರು ಶನಿವಾರ ಅಮೃತ್‌ಪಾಲ್‌ನನ್ನು ಬಂಧಿಸುವುದಕ್ಕಾಗಿ ಬೆನ್ನಟ್ಟಿದ್ದಾಗ ಆತ ಇದೇ ಕಾರಿನಲ್ಲಿ ಪ್ರಯಾಣಿಸುತ್ತಿದ್ದ' ಎಂದಿದ್ದಾರೆ.

                  'ಸಾಮಾಜಿಕ ಕಾರ್ಯಕರ್ತ ಎಂದು ಬಿಂಬಿಸಿಕೊಂಡಿದ್ದ ಅಮೃತ್‌ಪಾಲ್‌, ಜನರನ್ನು ವ್ಯಸನಗಳಿಂದ ಮುಕ್ತಗೊಳಿಸುವುದಾಗಿ ಹೇಳಿಕೊಂಡು ಇದಕ್ಕಾಗಿಯೇ ಕೆಲ ಕೇಂದ್ರಗಳನ್ನು ಆರಂಭಿಸಿದ್ದ. ಆತ ಹಾಗೂ ಆತನ ನಂಬಿಕಸ್ಥ ಸಹಚರರು ಈ ಕೇಂದ್ರಗಳಿಗೆ ದಾಖಲಾಗುವವರಲ್ಲಿ ಹಿಂಸಾತ್ಮಕ ಮನೋಧೋರಣೆ ಬೆಳೆಸಲು ಪ್ರಯತ್ನಿಸುತ್ತಿದ್ದರು. ಆ ಮೂಲಕ ಖಾಸಗಿ ಸೇನಾಪಡೆಯೊಂದನ್ನು ಕಟ್ಟುವ ಕಾರ್ಯಕ್ಕೆ ಮುಂದಾಗಿದ್ದ. ಶಸ್ತ್ರಾಸ್ತ್ರಗಳನ್ನು ಅಕ್ರಮವಾಗಿ ಸಂಗ್ರಹಿಸಿಡುವುದಕ್ಕಾಗಿಯೂ ಈ ಕೇಂದ್ರಗಳನ್ನು ಬಳಸಿಕೊಳ್ಳಲಾಗುತ್ತಿತ್ತು' ಎಂದು ವಿವರಿಸಿದ್ದಾರೆ.

               'ಈ ಕೇಂದ್ರಗಳಲ್ಲಿ ವೈದ್ಯರು ಇರುತ್ತಿರಲಿಲ್ಲ. ತನ್ನ ನಿರ್ದೇಶನಗಳನ್ನು ಯಾರು ಪಾಲಿಸುವುದಿಲ್ಲವೋ ಅಂತಹವರನ್ನು ಕ್ರೂರ ರೀತಿಯಲ್ಲಿ ಹಿಂಸಿಸುತ್ತಿದ್ದ. ಅಂತರರಾಷ್ಟ್ರೀಯ ಸಿಖ್ ಯೂತ್‌ ಫೆಡರೇಷನ್‌ನ ಮುಖ್ಯಸ್ಥ ಹಾಗೂ ಪಾತಕಿ ಲಖ್ಬೀರ್‌ ಸಿಂಗ್‌ ರೋಡ್‌ ಜೊತೆಗೂ ಈತ ಒಡನಾಟ ಇಟ್ಟುಕೊಂಡಿದ್ದ' ಎಂದು ತಿಳಿಸಿದ್ದಾರೆ.

                ಐವರ ವಿರುದ್ಧ ಪ್ರಕರಣ: ಅಮೃತ್‌ಪಾಲ್‌ಗಾಗಿ ಶೋಧ ಮುಂದುವರಿಸಿರುವ ಪೊಲೀಸರು ಆತನ ಐವರು ಬೆಂಬಲಿಗರ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆಯ (ಎನ್‌ಎಸ್‌ಎ) ಅಡಿ ಸೋಮವಾರ ಪ್ರಕರಣ ದಾಖಲಿಸಿದ್ದಾರೆ.

                'ವಾರಿಸ್‌ ಪಂಜಾಬ್‌ ದೇ' ಸಂಘಟನೆಗೆ ಸೇರಿದ 114 ಮಂದಿಯನ್ನು ಬಂಧಿಸಲಾಗಿದೆ. ಈ ಸಂಘಟನೆ ವಿರುದ್ಧ ಒಟ್ಟು ಆರು ಎಫ್‌ಐಆರ್‌ಗಳು ದಾಖಲಾಗಿವೆ' ಎಂದು ಪಂಜಾಬ್‌ ಐಜಿಪಿ ಸುಖ್‌ಚೈನ್‌ ಸಿಂಗ್‌ ಗಿಲ್‌ ಮಾಧ್ಯಮದವರಿಗೆ ಮಾಹಿತಿ ನೀಡಿದ್ದಾರೆ.

                     'ದಲ್ಜಿತ್‌ ಸಿಂಗ್‌ ಕಾಲ್ಸಿ, ಭಗವಂತ್‌ ಸಿಂಗ್‌, ಗುರ್ಮೀತ್‌ ಸಿಂಗ್‌, 'ಪ್ರಧಾನಮಂತ್ರಿ' ಬಜೇಕೆ ವಿರುದ್ಧ ಎನ್‌ಎಸ್‌ಎ ಅಡಿ ಪ್ರಕರಣ ದಾಖಲಿಸಲಾಗಿದೆ. ಇವರನ್ನು ಅಸ್ಸಾಂ ರಾಜ್ಯದ ದಿಬ್ರೂಗಢದಲ್ಲಿರುವ ಕೇಂದ್ರ ಕಾರಾಗೃಹಕ್ಕೆ ಭಾನುವಾರವೇ ರವಾನಿಸಲಾಗಿದೆ. ಅಮೃತ್‌ಪಾಲ್‌ನ ಸಂಬಂಧಿ ಹರ್ಜೀತ್‌ ಸಿಂಗ್‌ ಎಂಬಾತನ ವಿರುದ್ಧವೂ ಎನ್‌ಎಸ್‌ಎ ಅಡಿ ಪ್ರಕರಣ ದಾಖಲಿಸಲಾಗಿದ್ದು, ಈತನನ್ನೂ ದಿಬ್ರೂಗಢದ ಜೈಲಿಗೆ ಕರೆದೊ‌ಯ್ಯಲಾಗುತ್ತದೆ' ಎಂದು ಹೇಳಿದ್ದಾರೆ.

             'ಪೊಲೀಸರು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಶಾಂತಿ ಸಭೆಗಳನ್ನು ನಡೆಸಿದ್ದಾರೆ. ನಾಗರಿಕರು ವದಂತಿಗಳಿಗೆ ಕಿವಿಗೊಡಬಾರದು. ಸುಳ್ಳು ಸುದ್ದಿಗಳನ್ನು ಹಬ್ಬಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ' ಎಂದು ಎಚ್ಚರಿಸಿದ್ದಾರೆ.

                       'ಅಮೃತ್‌ಪಾಲ್‌ನ ಸಂಬಂಧಿ ಹರ್ಜೀತ್‌ ಸಿಂಗ್‌ ಹಾಗೂ ಕಾರು ಚಾಲಕ ಹರ್‌ಪ್ರೀತ್‌ ಸಿಂಗ್‌ ಎಂಬುವರು ಜಲಂಧರ್‌ನ ಮೆಹಾತ್‌ಪುರ ಪ್ರದೇಶದಲ್ಲಿರುವ ಗುರುದ್ವಾರದ ಬಳಿ ಭಾನುವಾರ ರಾತ್ರಿ ಪೊಲೀಸರಿಗೆ ಶರಣಾಗಿದ್ದಾರೆ' ಎಂದು ಪೊಲೀಸ್ ವರಿಷ್ಠಾಧಿಕಾರಿ (ಗ್ರಾಮೀಣ) ಸ್ವರಣ್‌ದೀಪ್‌ ಸಿಂಗ್‌ ಹೇಳಿದ್ದಾರೆ.

                                    ಅಂತರ್ಜಾಲ ಸೇವೆ ಮೇಲಿನ ನಿರ್ಬಂಧ ವಿಸ್ತರಣೆ

              'ರಾಜ್ಯದಲ್ಲಿ ಮೊಬೈಲ್‌ ಅಂತರ್ಜಾಲ ಸೇವೆ ಹಾಗೂ ಸಂದೇಶ ವಿನಿಮಯದ ಮೇಲೆ ಹೇರಲಾಗಿರುವ ನಿರ್ಬಂಧವನ್ನು ಮಂಗಳವಾರ ಸಂಜೆಯವರೆಗೂ ವಿಸ್ತರಿಸಲಾಗುತ್ತದೆ' ಎಂದು ಪಂಜಾಬ್‌ ಸರ್ಕಾರ ಹೇಳಿದೆ.

                 ಅಂತರ್ಜಾಲ ಹಾಗೂ ಸಂದೇಶ ವಿನಿಮಯ ಸೇವೆಯನ್ನು ಭಾನುವಾರ ಸಂಜೆಯವರೆಗೂ ನಿರ್ಬಂಧಿಸಿ ಶನಿವಾರ ಆದೇಶಿಸಲಾಗಿತ್ತು. ಬಳಿಕ ಇದನ್ನು ಸೋಮವಾರ ಸಂಜೆವರೆಗೂ ವಿಸ್ತರಿಸಲಾಗಿತ್ತು. ಬ್ಯಾಂಕ್‌, ಆಸ್ಪತ್ರೆ ಹಾಗೂ ಇತರ ಅಗತ್ಯ ಸೇವೆಗಳಿಗೆ ಅಡಚಣೆ ಉಂಟಾಗುವ ಕಾರಣ ಬ್ರಾಡ್‌ಬ್ಯಾಂಡ್‌ ಸೇವೆಗೆ ನಿರ್ಬಂಧ ಹೇರಲಾಗಿಲ್ಲ.

                                       ಗಡಿಭಾಗದಲ್ಲಿ ತೀವ್ರ ನಿಗಾ

                     'ಅಮೃತ್‌ಪಾಲ್‌ನನ್ನು ಬಂಧಿಸುವ ಉದ್ದೇಶದಿಂದ ಪಂಜಾಬ್‌ಗೆ ಹೊಂದಿಕೊಂಡಿರುವ ಗಡಿ ಭಾಗದಲ್ಲಿ ತೀವ್ರ ನಿಗಾ ಇಡಲಾಗಿದ್ದು, ಭದ್ರತೆಯನ್ನೂ ಹೆಚ್ಚಿಸಲಾಗಿದೆ' ಎಂದು ಹಿಮಾಚಲಪ್ರದೇಶ ಮುಖ್ಯಮಂತ್ರಿ ಸುಖ್ವಿಂದರ್‌ ಸಿಂಗ್‌ ಸುಖು ಅವರು ಸೋಮವಾರ ಹೇಳಿದ್ದಾರೆ.

                'ದುಷ್ಕರ್ಮಿಗಳು ರಾಜ್ಯದೊಳಗೆ ಪ್ರವೇಶಿಸುವ ಸಾಧ್ಯತೆ ಇರುವುದರಿಂದ ಗಡಿ ಭಾಗದಲ್ಲಿ ತಪಾಸಣೆ ಹೆಚ್ಚಿಸುವಂತೆ ಅಧಿಕಾರಿಗಳಿಗೆ ನಿರ್ದೇಶಿಸಲಾಗಿದೆ. ಈ ಪ್ರಕ್ರಿಯೆಯಿಂದ ಪ್ರವಾಸಿಗರಿಗೆ ಯಾವುದೇ ತೊಂದರೆಯಾಗದಂತೆ ಎಚ್ಚರ ವಹಿಸುವಂತೆಯೂ ಸೂಚಿಸಲಾಗಿದೆ' ಎಂದಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries