ಕಾಸರಗೋಡು: ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ಕಾಸರಗೋಡು ಸಿಪಿಸಿಆರ್‍ಐನಲ್ಲಿ ಆಚರಿಸಲಾಯಿತು. ಕೇರಳದ ಮೊದಲ ಮಹಿಳಾ ಪ್ರಯಾಣಿಕ ಮತ್ತು ಯುವ ಉದ್ಯಮಿ ಒಲಿ ಅಮನ್ ಜೋಧಾ ಮುಖ್ಯ ಅತಿಥಿಯಾಗಿ ಭಾಗವಹಿಸಿದರು.
ವಯನಾಡಿನ ಅಂಬಲವಯಲ್ ನಿವಾಸಿಯಾಗಿರುವ 16ರ ಹರೆಯದ ಒಲಿ ಅಮನ್ ಜೋಧಾ ತನ್ನ 9 ನೇ ವಯಸ್ಸಿನಲ್ಲಿ ನೇಪಾಳಕ್ಕೆ ತೆರಳಿ ಕುದುರೆ ಬೂಟುಗಳನ್ನು ತಯಾರಿಸುವ ಬಗ್ಗೆ ತರಬೇತಿ ಪಡೆದಿದ್ದರು. ಈ ಸಂದರ್ಭ ಮಾತನಾಡಿದ ಅವರು, ಪರಸ್ಪರ ಗೌರವ ಮತ್ತು ಲಿಂಗ ಸಮಾನತೆಯ ಮೂಲಭೂತ ಶಿಕ್ಷಣ ನಮ್ಮ ಮನೆಯಿಂದ ಆರಂಭಗೊಳ್ಳಬೇಕು. ವಿದ್ಯಾರ್ಥಿಗಳು ಸ್ವತಂತ್ರರಾಗಿ, ಸ್ವಾವಲಂಬಿಗಳಾಗಿರಬೇಕು ಮತ್ತು ಇತರರ ಸಲುವಾಗಿ ತಮ್ಮ ಆಸೆಗಳನ್ನು ಬಲಿ ನೀಡದಂತೆ ಸಲಹೆ ನೀಡಿದರು.
ಸಮಾರಂಭದಲ್ಲಿ ಕೃಷಿ ವಿಜ್ಞಾನ ಕೇಂದ್ರ ಸಿಪಿಸಿಆರ್‍ಐ ಕಾಸರಗೋಡು ವತಿಯಿಂದ ತರಬೇತಿ ಪಡೆದ 4 ಮಂದಿ ಮಹಿಳಾ ಉದ್ಯಮಿಗಳಾದ ರಮ್ಯಾ ಕೆ.ವಿ., ರತಿ ಮೋಹನ್, ಉಷಾ ನಾಯರ್, ಸುಹ್ರಾಬಿ ಫಯಾಜ್ ಅವರನ್ನು ಸನ್ಮಾನಿಸಲಾಯಿತು ಹಾಗೂ ಇವರು ಅಭಿವೃದ್ಧಿಪಡಿಸಿದ ಆಹಾರ ಉತ್ಪನ್ನಗಳನ್ನು ಬಿಡುಗಡೆ ಮಾಡಲಾಯಿತು.
ಸಿಪಿಸಿಆರ್‍ಐ ನಿರ್ದೇಶಕ ಡಾ.ಕೆ.ಬಿ.ಹೆಬ್ಬಾರ್ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ವಿಜ್ಞಾನಿ ಡಾ.ನೀರಾಲ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಹಿರಿಯ ಶ್ರೇಣಿಯ ಸಿಎಒ ಹರೀಶ್ ನಾಯರ್ ಸ್ವಾಗತಿಸಿದರು. ಮುಖ್ಯ ತಾಂತ್ರಿಕ ಅಧಿಕಾರಿ ಸುಗತ ಪದ್ಮನಾಭ ವಂದಿಸಿದರು. ಸಿಪಿಸಿಆರ್‍ಐ ಸಿಬ್ಬಂದಿ ಹಾಗೂ ಅಡ್ಕತ್ತಬೈಲ್ ಸರ್ಕಾರಿ ಯುಪಿ ಶಾಲೆಯ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಸಿಪಿಸಿಆರ್‍ಐನಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ
0
ಮಾರ್ಚ್ 12, 2023
Tags