ಜನರಲ್ಲಿ ಕ್ಯಾಲ್ಸಿಯಂ ಕೊರತೆ ಉಂಟಾಗೋದು ಸಹಜ. ಹಾಗಂತ ಇದನ್ನು ಕಡೆಗಣಿಸೋದಕ್ಕೆ
ಆಗೋದಿಲ್ಲ. ಯಾಕಂದ್ರೆ ಮುಂದೆ ಇದು ಭವಿಷ್ಯದಲ್ಲಿ ಮಹಾ ಅಪಾಯವನ್ನೇ ತಂದೊಡ್ಡಬಹುದು.
ಕೆಲವೊಂದು ಆಹಾರ ಕ್ರಮಗಳನ್ನು ನಮ್ಮ ಜೀವನ ಶೈಲಿಯಲ್ಲಿ ಅಳವಡಿಸಿಕೊಂಡರೆ
ಕ್ಯಾಲ್ಸಿಯಂ ಕೊರತೆ ನಮ್ಮನ್ನು ಕಾಡೋದಿಲ್ಲ. ಹಾಗಾದ್ರೆ ದೇಹದಲ್ಲಿ ಕ್ಯಾಲ್ಸಿಯಂ ಕೊರತೆ
ಆಗಿದೆ ಎಂದು ಗೊತ್ತಾಗೋದು ಹೇಗೆ? ದೇಹದಲ್ಲಿ ಆಗುವ ಯಾವೆಲ್ಲಾ ಬದಲಾವಣೆಗಳಿಂದ ನಮಗೆ
ಕ್ಯಾಲ್ಸಿಯಂ ಕೊರತೆ ಆಗಿದೆ ಎಂದು ಗೊತ್ತಾಗುತ್ತೆ? ಈ ಬಗ್ಗೆ ತಿಳಿಯೋಣ.
1. ಅಸಹಜ ಹೃದಯದ ಬಡಿತ
ಅನಿಯಮಿತ ಹೃದಯ ಬಡಿತವು ಹೈಪೋಕಾಲ್ಸೆಮಿಯಾದ ವಿಶಿಷ್ಟ ಲಕ್ಷಣವಾಗಿದೆ. ಇದರಿಂದ
ಜೀವಕ್ಕೆ ಅಪಾಯ ಉಂಟಾಗುವ ಸಾಧ್ಯತೆ ಕೂಡ ಇದೆ. ಕ್ಯಾಲ್ಸಿಯಂ ಕೊರತೆಯು ಹೃದಯದ
ಸ್ನಾಯುಗಳಿಗೆ ತೊಂದರೆಯನ್ನುಂಟು ಮಾಡೋದ್ರಲ್ಲಿ ಅನುಮಾನವಿಲ್ಲ. ಹೃದಯದ ಕೋಶಗಳಿಗೆ
ಸಾಕಷ್ಟು ಕ್ಯಾಲ್ಸಿಯಂ ಸಿಗದಿದ್ದರೆ ಅದು ಕೆಲಸ ಮಾಡೋದನ್ನು ನಿಲ್ಲಿಸುತ್ತದೆ.
2. ಸ್ನಾಯು ಸೆಳೆತ
ಕ್ಯಾಲ್ಸಿಯಂ ಕೊರತೆಯ ಲಕ್ಷಣಗಳಲ್ಲಿ ಮುಖ್ಯವಾದುದು ಸ್ನಾಯು ಸೆಳೆತ. ಕ್ಯಾಲ್ಸಿಯಂ
ಸ್ನಾಯುಗಳನ್ನು ಸಂಕುಚಿತಗೊಳಿಸಲು ಮತ್ತು ವಿಶ್ರಾಂತಿ ಪಡೆಯಲು ಸಹಾಯ ಮಾಡುತ್ತದೆ.
ಕ್ಯಾಲ್ಸಿಯಂ ಕೊರತೆಯಿರುವ ಸ್ನಾಯುಗಳು ಮೊದಲಿನಂತೆ ಆರೋಗ್ಯವಾಗಿ ಇರೋದಕ್ಕೆ
ಸಾಧ್ಯವಾಗೋದಿಲ್ಲ. ಕ್ಯಾಲ್ಸಿಯಂ ಕೊರತೆಯಿಂದ ನೋವು, ಸೆಳೆತ, ಮತ್ತು ಸ್ನಾಯು
ದೌರ್ಬಲ್ಯಕ್ಕೆ ಕಾರಣವಾಗಬಹುದು.
3. ಮೆದುಳಿಗೆ ತೊಂದರೆ ಉಂಟು ಮಾಡುತ್ತದೆ
ನರಪ್ರೇಕ್ಷಕಗಳನ್ನು ಬಿಡುಗಡೆ ಮಾಡಲು ಮೆದುಳಿನ ಕೋಶಗಳಿಗೆ ಅತ್ಯುತ್ತಮ ಕ್ಯಾಲ್ಸಿಯಂನ
ಅವಶ್ಯಕತೆಯಿದೆ. ಹೈಪೋಕಾಲ್ಸೆಮಿಯಾವು ಮೆದುಳನ್ನು ಅತಿಯಾಗಿ ಪ್ರಚೋದಿಸಬಹುದು ಮತ್ತು ಇದು
ಮೆದುಳು ರೋಗಗ್ರಸ್ಥವಾಗೋದಕ್ಕೆ ಪ್ರಚೋದಿಸುತ್ತದೆ.
4. ಮರಗಟ್ಟುವಿಕೆ ಮತ್ತು ಜುಮ್ಮೆನಿಸುವಿಕೆ
ಹೈಪೋಕಾಲ್ಸೆಮಿಯಾದ ಮತ್ತೊಂದು ಪ್ರಮುಖ ಲಕ್ಷಣವೆಂದರೆ ಕೈ ಮತ್ತು ಪಾದಗಳ
ತುದಿಗಳಲ್ಲಿ ಜುಮ್ಮೆನ್ನುವುದು. ಒಂದು ವೇಳೆ ಕ್ಯಾಲ್ಸಿಯಂನ ತೀವ್ರ ಕೊರತೆಯಾದರೆ
ಮರಗಟ್ಟುವಿಕೆಗೆ ಉಂಟಾಗುವ ಸಾಧ್ಯತೆಯು ಇರುತ್ತದೆ. ನಿಮ್ಮ ದೇಹದ ಪ್ರತಿಯೊಂದು
ನರಕೋಶಕ್ಕೂ ಕ್ಯಾಲ್ಸಿಯಂ ಅಗತ್ಯವಿದೆ. ಕ್ಯಾಲ್ಸಿಯಂ ತುಂಬಾ ಕಡಿಮೆಯಾದಾಗ ನರ ಕೋಶಗಳು
ಸಂವೇದನೆ ಉಂಟಾಗುತ್ತದೆ.
5. ಹಲ್ಲಿನ ಕ್ಷಯ ಮತ್ತು ಒಸಡು ಕಾಯಿಲೆ ಉಂಟಾಗುತ್ತದೆ
ಕ್ಯಾಲ್ಸಿಯಂ ನಿಮ್ಮ ಹಲ್ಲುಗಳನ್ನು ಬಲಪಡಿಸುತ್ತದೆ. ಆಹಾರ, ಪಾನೀಯಗಳು ಮತ್ತು ಬಾಯಿಯ
ಬ್ಯಾಕ್ಟೀರಿಯಾಗಳು ಹಲ್ಲುಗಳಲ್ಲಿನ ಖನಿಜಗಳನ್ನು ನಾಶಪಡಿಸಬಹುದು. ಮತ್ತು ಹಲ್ಲು
ಹುಳುಕಾಗುವುದು ಮುಂತಾದ ಸಮಸ್ಯೆಗಳನ್ನು ತಂದೊಡ್ಡಬಹುದು. ಈ ಖನಿಜ ನಷ್ಟವನ್ನು
ತಡೆಗಟ್ಟಲು ಸಾಕಷ್ಟು ಕ್ಯಾಲ್ಸಿಯಂನ ಅವಶ್ಯಕತೆಯಿದೆ. ಹೀಗಾಗಿ ಹಲ್ಲು ಹುಳುಕಾಗೋದು ಅಥವಾ
ವಸಡಿನಲ್ಲಿ ಸಮಸ್ಯೆಗಳು ಕಂಡು ಬಂದರೆ ಕ್ಯಾಲ್ಸಿಯಂ ಮಟ್ಟ ಕಡಿಮೆ ಇದೆ ಎಂದರ್ಥ.
6. ಒಣ ತ್ವಚೆ
ಒಣ ತ್ವಚೆ ಅಥವಾ ನೆತ್ತಿಯ ಚರ್ಮ ಒಣಗೋದು ಹೈಪೋಕಾಲ್ಸೆಮಿಯಾದ ಲಕ್ಷಣವಾಗಿರಬಹುದು.
ದೇಹದಲ್ಲಿ ಕ್ಯಾಲ್ಸಿಯಂ ಕಡಿಮೆಯಾದಾಗ ಚರ್ಮದ ಪಿ ಹೆಚ್ ಅನ್ನು ಕಡಿಮೆ ಮಾಡುತ್ತದೆ.
ರಕ್ತದಲ್ಲಿ ಕ್ಯಾಲ್ಸಿಯಂ ಮಟ್ಟ ತುಂಬಾ ಕಡಿಮೆಯಾದಾಗ, ಚರ್ಮವು ತೇವಾಂಶ ಮತ್ತು ಆರೋಗ್ಯಕರ
ಪಿಹೆಚ್ ಅನ್ನು ಕಾಪಾಡಿಕೊಳ್ಳಲು ಸಾಧ್ಯವಿಲ್ಲ.
7. ದಿಗ್ಭ್ರಮೆ ಹಾಗೂ ನೆನಪಿನ ಶಕ್ತಿ ಕಳೆದುಕೊಳ್ಳುವುದು
ಗೊಂದಲ, ದಿಗ್ಭ್ರಮೆ ಮತ್ತು ನೆನಪಿನ ಶಕ್ತಿ ಕಳೆದು ಕೊಳ್ಳುವುದು ಇವೆಲ್ಲವೂ
ಹೈಪೋಕಾಲ್ಸೆಮಿಯಾದ ಲಕ್ಷಣಗಳಾಗಿರಬಹುದು. ನರ ಮತ್ತು ಮೆದುಳಿನ ಕೋಶಗಳು ಕ್ಯಾಲ್ಸಿಯಂ
ಅನ್ನು ಅವಲಂಬಿಸಿರುತ್ತದೆ. ನರ ಕೋಶಗಳನ್ನು ಪ್ರವೇಶಿಸುವ ಕ್ಯಾಲ್ಸಿಯಂ ನರಪ್ರೇಕ್ಷಕಗಳ
ಬಿಡುಗಡೆಯನ್ನು ಉತ್ತೇಜಿಸುತ್ತದೆ. ಕ್ಯಾಲ್ಸಿಯಂನ ಕೊರತೆ ಉಂಟಾದರೆ ಮೆದುಳಿನ
ಚಟುವಟಿಕೆಯಲ್ಲಿ ಬದಲಾವಣೆಗಳು ಉಂಟಾಗುತ್ತದೆ.