ನವದೆಹಲಿ :ಎಲ್ಲ ಸರ್ಕಾರಿ ನೌಕರರಿಗೆ ಕಚೇರಿಗಳಿಗೆ ದೈಹಿಕವಾಗಿ ಹಾಜರಾಗಬೇಕೇ ಹೊರತು ಮನೆಯಿಂದ ಕಾರ್ಯನಿರ್ವಹಿಸಕೂಡದು ಎಂದು ಆಗ್ರಹಿಸಲಾಗುವುದು ಎಂದು ಸಚಿವ ಜಿತೇಂದ್ರ ಸಿಂಗ್ ಲೋಕಸಭೆಗೆ ತಿಳಿಸಿದ್ದಾರೆ.
ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ ಹಾಗೂ ಪಿಂಚಣಿ ಸಚಿವಾಲಯದ ರಾಜ್ಯ ಸಚಿವ ಜಿತೇಂದ್ರ ಸಿಂಗ್, ಕೇಂದ್ರ ಸರ್ಕಾರದ ನೌಕರರಿಗೆ ಮನೆಯಿಂದ ಕೆಲಸ ಮಾಡಲು ಅವಕಾಶ ನೀಡುವುದು ಕಾರ್ಯಸಾಧುವಲ್ಲ ಹಾಗೂ ನೌಕರರು ಕಚೇರಿಗೆ ದೈಹಿಕವಾಗಿ ಹಾಜರಾಗಬೇಕು ಎಂದು ತಿಳಿಸಿದ್ದಾರೆ.
ಬಿಜೆಪಿ ಸಂಸದ ರಂಜನ್‌ಬೆನ್ ಧನಂಜಯ್ ಹಾಗೂ ಎನ್‌ಸಿಪಿ ಸಂಸದ ಶ್ರೀನಿವಾಸ್ ದಾದಾಸಾಹೇಬ್ ಪಾಟೀಲ್ ಅವರ ಪ್ರಶ್ನೆಗೆ ಸಚಿವರು ಮೇಲಿನಂತೆ ಉತ್ತರಿಸಿದ್ದಾರೆ.
ಕೋವಿಡ್ ಕಾಲಘಟ್ಟದಲ್ಲಿ ಮನೆಯಿಂದ ಕೆಲಸ ಮಾಡಲು ಅವಕಾಶ ನೀಡಿದ್ದು ಒಂದು ಸಾಧ್ಯತೆಯಾಗಿದ್ದು, ಅದನ್ನೇ ಹೊಸ ಸಹಜ ಸ್ಥಿತಿಯಾಗಿಸಲು ಸಾಧ್ಯವಿಲ್ಲ. ಕೆಲಸದ ಪ್ರಕೃತಿ ಮತ್ತು ಅದರ ಕಾರ್ಯಾಚರಣೆಯ ಅವಶ್ಯಕತೆಗಳನ್ವಯ ಸರ್ಕಾರದಲ್ಲಿನ ಬಹುತೇಕ ಪಾತ್ರಗಳು ದೂರದಲ್ಲಿ ಕುಳಿತು ಕೆಲಸ ಮಾಡಲು ಕಾರ್ಯಸಾಧುವಾಗಿಲ್ಲ. ಹೀಗಿದ್ದೂ, ಕೋವಿಡ್ 19 ಕಾಲಘಟ್ಟದಲ್ಲಿ ಸಾಮಾಜಿಕ ಅಂತರ ಕಾಪಾಡಲು ಕೆಲಸ ಮಾಡುವ ಸ್ಥಳಗಳಲ್ಲಿ ಮಧ್ಯಮ ಹಾಗೂ ದರ್ಜೆ ನೌಕರರಿಗೆ ಮನೆಯಿಂದ ಕೆಲಸ ಮಾಡಲು ವಿನಾಯಿತಿ ನೀಡಲಾಗಿತ್ತು. ಸಾಂಕ್ರಾಮಿಕ ನಿರ್ಬಂಧಗಳು ತೆರವುಗೊಂಡಿರುವುದರಿಂದ ನೌಕರರು ದೈಹಿಕವಾಗಿ ಕಚೇರಿಗೆ ಹಾಜರಾಗಬೇಕು ಎಂದು ಅವರು ಪ್ರತಿಪಾದಿಸಿದ್ದಾರೆ.