ಬದಿಯಡ್ಕ: ನಾಡಿನ ಜನತೆ ದರಕಡಿತದಲ್ಲಿ ಉಚಿತವಾಗಿ ಚಿಕಿತ್ಸೆ ಲಭಿಸಲು ಮೆಡಿಕಲ್ ಕಾಲೇಜುಗಳು ಅನಿವಾರ್ಯ. ಶಿಲಾನ್ಯಾಸಗೈದು 10 ವರ್ಷ ಕಳೆದರೂ ಕಾಸರಗೋಡು ಜಿಲ್ಲೆಯ ಜನತೆಯ ಮೆಡಿಕಲ್ ಕಾಲೇಜು ಎಂಬ ಕನಸು ಇನ್ನೂ ನನಸಾಗಿಲ್ಲ. ಇದೀಗ ರಾಜ್ಯ ಸರಕಾರವು ಹಣವನ್ನು ನೀಡದ ಹಿನ್ನೆಲೆಯಲ್ಲಿ ಗುತ್ತಿಗೆದಾರ ಕಂಪೆನಿಯು ನಿರ್ಮಾಣಕಾರ್ಯವನ್ನು ನಿಲ್ಲಿಸಿದೆ. ನಾಡಿನ ಜನತೆಯ ಹಣವನ್ನು ಸಹಕಾರೀ ಮೆಡಿಕಲ್ ಸಂಸ್ಥೆಗಳಿಗೆ ನೀಡಲು ಎಡರಂಗ ಸರಕಾರ ಹೊರಟಿದೆ ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ವಕೀಲ ಕೆ.ಶ್ರೀಕಾಂತ್ ಆರೋಪಿಸಿದರು.
ಉಕ್ಕಿನಡ್ಕ ವೈದ್ಯಕೀಯ ಕಾಲೇಜು ನಿರ್ಮಾಣ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಬಿಜೆಪಿ ಬದಿಯಡ್ಕ ಮಂಡಲದ ನೇತೃತ್ವದಲ್ಲಿ ಬದಿಯಡ್ಕ ಬಸ್ ನಿಲ್ದಾಣ ಪರಿಸರದಲ್ಲಿ ಮಂಗಳವಾರ ಸಂಜೆ ನಡೆದ ಧರಣಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ರಾಜ್ಯ ಸರಕಾರ ಹಾಗೂ ಇಲ್ಲಿನ ಜನಪ್ರತಿನಿಧಿಗಳು ಕಾಸರಗೋಡಿನ ಜನತೆಯ ಕಣ್ಣೀರೊರೆಸುವಲ್ಲಿ ಹಿಂದೇಟು ಹಾಕುತ್ತಿದ್ದಾರೆ. ಸಹಕಾರೀ ಮೆಡಿಕಲ್ ಲಾಭಿಯಿಂದ ಇಲ್ಲಿನ ಜನರಿಗೆ ವಂಚನೆಯಾಗುತ್ತಿದೆ ಎಂದು ಹೇಳಿದರು.
ಬಿಜೆಪಿ ಬದಿಯಡ್ಕ ಮಂಡಲ ಅಧ್ಯಕ್ಷ ಹರೀಶ್ ನಾರಂಪಾಡಿ ಅಧ್ಯಕ್ಷತೆ ವಹಿಸಿದ್ದರು.
ಮಹಿಳಾ ಮೋರ್ಚಾ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯೆ ಎಂ.ಎಲ್.ಅಶ್ವಿನಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷೆ ಎಂ.ಜನನಿ, ಉಪಾಧ್ಯಕ್ಷ ರಾಮಪ್ಪ ಮಂಜೇಶ್ವರ, ಜಿಲ್ಲಾ ಸಹಕಾರ್ಯದರ್ಶಿ ಸೌಮ್ಯ ಮಹೇಶ್, ಎಸ್.ಟಿ.ಮೋರ್ಚಾ ಅಧ್ಯಕ್ಷ ಈಶ್ವರರ ಮಾಸ್ತರ್, ಜಿಲ್ಲಾಪಂಚಾಯಿತಿ ಸದಸ್ಯೆ ಶೈಲಜಾ ಎಂ.ಭಟ್, ಕರ್ಷಕ ಮೋರ್ಚಾ ಜಿಲ್ಲಾ ಪ್ರ.ಕಾರ್ಯದರ್ಶಿ ಚಂದುಮಾಸ್ತರ್, ರಾಜ್ಯ ಸಮಿತಿ ಸದಸ್ಯ ಶಿವಕೃಷ್ಣ ಭಟ್, ಪಕ್ಷದ ಮುಖಂಡರು, ಕಾರ್ಯಕರ್ತರು ಪಾಲ್ಗೊಂಡಿದ್ದರು. ಮಂಡಲ ಕಾರ್ಯದರ್ಶಿ ಸುನಿಲ್ ಪಿ.ಆರ್ ಸ್ವಾಗತಿಸಿ, ಕರ್ಷಕ ಮೋರ್ಚಾ ಮಂಡಲ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ ಕಡಾರು ವಂದಿಸಿದರು.
ಸಹಕಾರೀ ಮೆಡಿಕಲ್ ಲಾಭಿಯಿಂದ ಕಾಸರಗೋಡಿಗೆ ವಂಚನೆ : ಕೆ.ಶ್ರೀಕಾಂತ್: ಉಕ್ಕಿನಡ್ಕ ಮೆಡಿಕಲ್ ಕಾಲೇಜು ನಿರ್ಮಾಣ ಕಾರ್ಯ ಸ್ಥಗಿತ ವಿರುದ್ಧ ಬಿಜೆಪಿ ಧರಣಿ
0
ಮಾರ್ಚ್ 22, 2023