ನವದೆಹಲಿ: ಇತ್ತೀಚಿನ ದಿನಗಳಲ್ಲಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ನೀಡುವ ಉತ್ತರ ಹಾಗೂ ಕೆಲವೊಮ್ಮೆ ಶಿಕ್ಷಕರು ಕೇಳುವ ವಿಚಿತ್ರ ಪ್ರಶ್ನೆಗಳ ಕುರಿತಾಗಿ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿರುತ್ತದೆ. ಇದೀಗ ಐದನೇ ತರಗತಿಯ ವಿದ್ಯಾರ್ಥಿ ನೀಡಿರುವ ಉತ್ತರ ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದೆ.
ಐದನೇ ತರಗತಿಯ ಮಕ್ಕಳಿಗೆ, 'ನೀವು ಸ್ವಾತಂತ್ರ್ಯಪೂರ್ವ ದಿನಗಳ ಸಮಾಜ ಸುಧಾರಕರೆಂದು ಭಾವಿಸಿ, ಅಂದು ಯಾವ ರೀತಿಯ ಸಾಮಾಜಿಕ ಸುಧಾರಣೆ ತರಲು ಬಯಸುತ್ತೀರಿ?ʼ ಎಂದು ಪ್ರಶ್ನಿಸಲಾಗಿತ್ತು. ಅದಕ್ಕೆ ಆ ಹುಡುಗ, ವಿಧವಾ ವಿವಾಹ ಪದ್ಧತಿಯ ಬಗ್ಗೆ ಹೇಳಿರುವುದು ಸಾಕಷ್ಟು ಮೆಚ್ಚುಗೆಗೆ ಪಾತ್ರವಾಗಿದೆ.
'ವಿಧವಾ ವಿವಾಹ ಕಾನೂನು ಆರಂಭಿಸಲು ನಾನು ಬಯಸುತ್ತೇನೆ. ಮಹಿಳೆ ವಿಧವೆಯಾದರೆ, ಅವರು ಸತಿ ಪದ್ಧತಿಯ ಮೊರೆ ಹೋಗುತ್ತಾರೆ ಅಥವಾ ಬಿಳಿ ಸೀರೆಯುಟ್ಟು, ಬಾಹ್ಯ ಪ್ರಪಂಚದಿಂದ ದೂರ ಇರುತ್ತಾರೆ. ಅವರಿಗೆ ಹೊರಗೆಲ್ಲೂ ಹೋಗುವ ಅವಕಾಶ ಇರುವುದಿಲ್ಲ. ವಿಧವೆಯರು ಮದುವೆಯಾದರೆ ಅವರಿಗೆ ಉತ್ತಮ ಹಾಗೂ ಸಂತಸದ ಜೀವನ ದೊರೆಯುತ್ತದೆʼಎಂದು ಉತ್ತರಿಸಿದ್ದಾನೆ.
ಸೋಷಿಯಲ್ ಸೈನ್ಸ್ ವಿಷಯದಲ್ಲಿ ಕೇಳಿದ ಪ್ರಶ್ನೆಗೆ ಅತ್ಯಂತ ಸಮಪರ್ಕವಾದ ಉತ್ತರ ನೀಡಿದ್ದಾನೆ. ಅದನ್ನು ಅವನ ತಂದೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವುದು ವೈರಲ್ ಆಗಿದೆ. ನೆಟ್ಟಿಗರು ಬಾಲಕನ ಜಾಣ್ಮೆಯನ್ನು ಶ್ಲಾಘಿಸುತ್ತಿದ್ದಾರೆ.