ಅಹಮದಾಬಾದ್: ಪ್ರಧಾನ ಮಂತ್ರಿ ಕಚೇರಿಯ ಅಧಿಕಾರಿಯ ಸೋಗಿನಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿ, ಝಡ್ ಪ್ಲಸ್ ಭದ್ರತೆಯೊಂದಿಗೆ 'ಐಷಾರಾಮಿ' ಪ್ರವಾಸ ಮಾಡಿದ್ದ ವಂಚಕ ಕಿರಣ್ ಪಟೇಲ್ ಪ್ರಕರಣದಲ್ಲಿ ತಮ್ಮ ಮಗನ ಹೆಸರು ಕೇಳಿಬಂದ ಹಿನ್ನೆಲೆಯಲ್ಲಿ ಗುಜರಾತ್ ಮುಖ್ಯಮಂತ್ರಿ ಕಚೇರಿಯ (ಸಿಎಂಒ) ಹಿರಿಯ ಅಧಿಕಾರಿಯೊಬ್ಬರು ರಾಜೀನಾಮೆ ನೀಡಿದ್ದಾರೆ ಎಂದು ಶನಿವಾರ ಸರ್ಕಾರದ ಮೂಲಗಳು ತಿಳಿಸಿವೆ.
ಸಿಎಂಒದಲ್ಲಿ ಹೆಚ್ಚುವರಿ ಸಾರ್ವಜನಿಕ ಸಂಪರ್ಕ ಅಧಿಕಾರಿ(ಪಿಆರ್‌ಒ)ಯಾಗಿದ್ದ ಹಿತೇಶ್ ಪಾಂಡ್ಯ ಅವರು ಶುಕ್ರವಾರ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಅವರ ಪುತ್ರ ಅಮಿತ್ ಪಾಂಡ್ಯ ಬಂಧಿತ ಆರೋಪಿ ಕಿರಣ್ ಪಟೇಲ್ ಜೊತೆ ನಂಟು ಹೊಂದಿದ್ದಾರೆ ಎಂದು ಅವರು ಹೇಳಿದ್ದಾರೆ.
ಸುಮಾರು ಎರಡು ದಶಕಗಳಿಂದ ಸಿಎಂಒದಲ್ಲಿ ಕೆಲಸ ಮಾಡುತ್ತಿದ್ದ ಪಾಂಡ್ಯ ಅವರು ಶುಕ್ರವಾರ ಸಂಜೆ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರಿಗೆ ರಾಜೀನಾಮೆ ಸಲ್ಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ನಗರದ ಘೋಡಸರ್ ನಿವಾಸಿ, ವಂಚಕ ಕಿರಣ್ ಪಟೇಲ್ ನನ್ನು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಮಾರ್ಚ್ 3 ರಂದು ಶ್ರೀನಗರದ ಪಂಚತಾರಾ ಹೋಟೆಲ್‌ನಲ್ಲಿ ಬಂಧಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರ ಪೊಲೀಸರು ಪಟೇಲ್ ನನ್ನು ಬಂಧಿಸಿದಾಗ ಹಿತೇಶ್ ಪಾಂಡ್ಯ ಅವರ ಪುತ್ರ ಅಮಿತ್ ಪಾಂಡ್ಯ ಜೊತೆಗಿದ್ದರು ಎಂದು ವರದಿಯಾಗಿದೆ.